ಕಾರವಾರ: ಗುಡ್ಡದಿಂದ ಬೃಹತ್ ಕಲ್ಲೊಂದು ಉರುಳಿ ಹೆದ್ದಾರಿಗೆ ಬಿದ್ದಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪಾರಾಗಿದ್ದಾನೆ. ಈ ಘಟನೆ ಹೊನ್ನಾವರದ ಹೊಸ ಪಟ್ಟಣದ ಬಳಿ ಇಂದು ಬೆಳಗ್ಗೆ ನಡೆದಿದೆ.
ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಿರೀಶ್ ನಾಯ್ಕ ಎಂಬುವರ ಬೈಕ್ಗೆ ಇದೇ ವೇಳೆ ಕಲ್ಲು ಬಡಿದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಗಾಗಿ ಗುಡ್ಡಗಳನ್ನು ತೆರವುಗೊಳಿಸಿದ್ದು, ಅವೈಜ್ಞಾನಿಕವಾಗಿ ಕೊರೆದ ಗುಡ್ಡದಿಂದ ಕಲ್ಲು ಉರುಳಿದೆ ಎನ್ನಲಾಗಿದೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಗುಡ್ಡಗಳು ಕುಸಿದು ಅನಾಹುತ ಸಂಭವಿಸುತ್ತಿದ್ದರೂ ಗುತ್ತಿಗೆ ಕಂಪನಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.