ಶಿರಸಿ(ಉತ್ತರ ಕನ್ನಡ): ಸುಮಾರು ಮೂರು ದಶಕಗಳ ಹಿಂದೆ ರಾಜ್ಯದಲ್ಲೇ ಪ್ರಥಮವಾಗಿ ಶಿರಸಿಯಲ್ಲಿ ಪ್ರಾರಂಭವಾದ ಮೊಲ ಸಾಕಾಣಿಕೆ ಕೇಂದ್ರ ಸೂಕ್ತ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಎರಡು ಕಡೆ ಮಾತ್ರ ಮೊಲ ಸಾಕಾಣಿಕೆ ಕೇಂದ್ರವಿದೆ. ಅದರ ಪೈಕಿ ಒಂದಾಗಿರುವ ಇಲ್ಲಿ ವಿವಿಧ ತಳಿಯ ಮೊಲ ಬೆಳೆಸಿ, ಅಭಿವೃದ್ಧಿಪಡಿಸಲು ಸೌಲಭ್ಯವಿದ್ದರೂ ಸರ್ಕಾರದ ಅನುದಾನವಿಲ್ಲದೇ, ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಮೊಲ ಸಾಕಾಣಿಕೆ ಕೇಂದ್ರ ದಿನೇ ದಿನೆ ಸೊರಗುವಂತಾಗಿದೆ.
ಹಲವು ದಶಕಗಳ ಹಿಂದೆ ಮೊಲ ಸಾಕಾಣಿಕೆ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಿತ್ತು. 1984ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಮೊಲ ಸಾಕಾಣಿಕೆ ಕೇಂದ್ರ ಪ್ರಾರಂಭವಾಯಿತು. ಸದ್ಯ ಹಾವೇರಿಯ ಬಂಕಾಪುರ ಬಿಟ್ಟರೆ, ಶಿರಸಿಯಲ್ಲಿ ಮಾತ್ರ ಈ ಸಾಕಾಣಿಕಾ ಕೇಂದ್ರವಿದೆ. ಮೊದಲು ಈ ಕೇಂದ್ರಕ್ಕೆ ಒಬ್ಬ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ದಿನ ಕಳೆದಂತೆ 2003ರಲ್ಲಿ ಈ ಕೇಂದ್ರದಲ್ಲಿ ನೇಮಕವಾಗಿದ್ದ ಸಿಬ್ಬಂದಿಯನ್ನು ಸರ್ಕಾರ ರದ್ದು ಮಾಡಿತ್ತು.
ಈ ಕೇಂದ್ರ ಪಶುಸಂಗೋಪನಾ ಇಲಾಖೆಯ ಅಧೀನದಲ್ಲಿದ್ದು, ಇಲ್ಲಿಗೆ ಪ್ರತ್ಯೇಕ ಸಿಬ್ಬಂದಿಗಳು ಬೇಕಿದ್ದರೂ ಕೂಡ ಸಿಬ್ಬಂದಿಗಳನ್ನು ಸರ್ಕಾರ ನೇಮಕ ಮಾಡಿಲ್ಲ. ಸದ್ಯ ಪಶುಸಂಗೋಪನಾ ಇಲಾಖೆಯ ಡಿ ಗ್ರೂಪ್ನ ಒಬ್ಬರೇ ಸಿಬ್ಬಂದಿ ಕೇಂದ್ರದ ಎಲ್ಲ ಕೆಲಸ ನಿರ್ವಹಿಸಬೇಕಿದೆ. ಸುಮಾರು 5 ಎಕರೆ ವಿಸ್ತೀರ್ಣದ ಮೊಲ ಸಾಕಾಣಿಕೆ ಕೇಂದ್ರದಲ್ಲಿ ಇದೀಗ 50 ರಿಂದ 60 ಮೊಲಗಳು ಇವೆ. ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ನಿರ್ವಹಣೆ ಕಷ್ಟವಾಗಿದ್ದು, ಮಾರುಕಟ್ಟೆಯ ಅಲಭ್ಯತೆಯಿಂದ ಮೊಲ ಸಾಕಾಣಿಕ ಕೇಂದ್ರ ಉತ್ತಮ ಸ್ಥಿತಿಯಲ್ಲಿ ಇಲ್ಲ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಜಾನನ ಹೊಸ್ಮನಿ ಹೇಳಿದರು.
ಶಿರಸಿಯ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊಲ ಸಾಕಾಣಿಕೆ ಕೇಂದ್ರವಿದೆ. ಗ್ರಾಮೀಣ ಭಾಗದಲ್ಲಿದ್ದರೂ ಮೊದಲು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಇಲ್ಲಿ 150 ರೂಪಾಯಿಯಿಂದ ಆರಂಭವಾಗಿ 500 ರೂ. ಬೆಲೆ ಇರುವ ಮೊಲಗಳಿವೆ. ಮೊದ ಮೊದಲು ಮೊಲಗಳಿಗೆ ಭಾರೀ ಬೇಡಿಕೆ ಇದ್ದರೂ ಈಗ ಬೇಡಿಕೆ ಕಡಿಮೆಯಾಗಿದೆ. ಮೊಲಗಳಿಗೆ ಆಹಾರ ನೀಡಲು ಸರ್ಕಾರದಿಂದ ಅನುದಾನ ಬರುತ್ತಿದೆ. ಆದರೆ ಕಟ್ಟಡ ನಿರ್ವಹಣೆ ಹಾಗೂ ಇತರ ಅವಶ್ಯಕತೆಗೆ ಯಾವುದೇ ಅನುದಾನ ಬರುತ್ತಿಲ್ಲ. ಮೊಲವನ್ನು ಸಾಕುವ ಪಂಜರಗಳು ಸಂಪೂರ್ಣ ಶಿಥಿಲಗೊಂಡಿವೆ. ಇದು ಮೂಲತಃ ಅರಣ್ಯ ಇಲಾಖೆಯ ಜಾಗವಾಗಿದೆ.. ಕಾಟಾಚಾರಕ್ಕೆ ಮೊಲ ಸಾಕಾಣಿಕೆ ಕೇಂದ್ರ ಇರುವುದರಿಂದ ಜಾಗದ ದುರುಪಯೋಗವಾಗುವ ಸಾಧ್ಯತೆಯೂ ಇದೆ. ಈ ಕಾರಣದಿಂದ ಜಾಗವನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಸರ್ಕಾರ ಯೋಚಿಸಲಿ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಒತ್ತಾಯಿಸಿದರು.
ಒಟ್ಟಾರೆ ಶಿರಸಿಯಲ್ಲಿರುವ ಮೊಲ ಸಾಕಾಣಿಕೆ ಕೇಂದ್ರವನ್ನು ಉಳಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು ಆಸಕ್ತಿ ವಹಿಸಬೇಕಿದೆ ಮತ್ತು ವಿಶೇಷ ಅನುದಾನವನ್ನು ಕೇಂದ್ರಕ್ಕೆ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರಕನ್ನಡ: ಕೆಸರು ಗದ್ದೆಯಂತಾದ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ಪರದಾಟ!