ಕಾರವಾರ : ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜವಾನನೇ ವೈದ್ಯನಾಗಿ ಮತ್ತು ಆರೋಗ್ಯ ಸಹಾಯಕಿಯೇ ಆಸ್ಪತ್ರೆಯ ಕಾರ್ಯಗಳನ್ನು ನಿರ್ವಹಿಸುತ್ತಿರೋ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ‘ಡಿ’ ಗ್ರೂಪ್ ನೌಕರ ವೈದ್ಯನಾಗಿ ರೋಗಿಗಳಿಗೆ ತಪಾಸಣೆ ನಡೆಸಿ, ಬಿಪಿ, ಶುಗರ್ ಹಾಗೂ ಇನ್ನಿತರೆ ರೋಗಗಳಿಗೂ ಔಷಧೋಪಚಾರ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಡಿ ಗ್ರೂಪ್ ನೌಕರ ದೀಪಕ ನಾಯ್ಕ್ ಅವರನ್ನು ಕೇಳಿದರೆ, ವೈದ್ಯಾಧಿಕಾರಿ ಡಾ. ನಿತೀನ್ ಹೊಸ್ಮೆಲಕರ್ ಅವರೇ ನನಗೆ ರೋಗದ ಬಗ್ಗೆ ತಿಳಿದು ಔಷಧ ನೀಡುವಂತೆ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ನಾನು ಔಷಧಿಗಳನ್ನು ನೀಡುತ್ತಿದ್ದೇನೆ ಎನ್ನುತ್ತಾರೆ. ಅಂಕೋಲಾ ತಾಲೂಕಿನ ಆರೋಗ್ಯ ಕೇಂದ್ರದಿಂದ 13 ಕಿ.ಮೀ. ದೂರದಲ್ಲಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ಕೊರತೆ ಇದ್ದು, ಜವಾನನೇ ವೈದ್ಯನಾಗಿದ್ದಾನೆ.
ಆಸ್ಪತ್ರೆಯ ವೈದ್ಯಾಧಿಕಾರಿ ಹುದ್ದೆ, ಶೂಶ್ರಷಕಿ, ಗುಮಾಸ್ತ, ಫಾರ್ಮಾಸಿಸ್ಟ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಹಿರಿಯ ಪುರುಷ ಆರೋಗ್ಯ ಸಹಾಯಕ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಲ್ಯಾಬ್ ಟೆಕ್ನಿಷಿಯನ್ ಮತ್ತು ಗ್ರೂಪ್ ‘ಡಿ’ ಹುದ್ದೆ ಖಾಲಿ ಇವೆ. ಆರೋಗ್ಯ ಕೇಂದ್ರದಲ್ಲಿ ಔಷಧ ವಿಭಾಗದ ಮೇಲ್ವಿಚಾರಕ (ಫಾರ್ಮಾಸಿಸ್ಟ್) ಇಲ್ಲದೇ ಔಷಧ ಉಗ್ರಾಣದ ನಿರ್ವಹಣೆಗೆ ತೊಡಕುಂಟಾಗಿದೆ. ಇದರಿಂದಾಗಿ ಜವಾನನೇ ಫಾರ್ಮಾಸಿಸ್ಟ್ ಹುದ್ದೆ ನಿರ್ವಹಿಸುತ್ತಿದ್ದಾನೆ.
ಇದನ್ನೇ ಓದಿ: ಕರಾವಳಿ-ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮಾನ್ಸೂನ್ ಚುರುಕು: ಜೂ. 17ರ ವರೆಗೆ ಆರೆಂಜ್ ಅಲರ್ಟ್
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೀಗ ಕೇವಲ ಇಬ್ಬರು ಸಿಬ್ಬಂದಿ ಮಾತ್ರ ಇರೋದು. ಇದೀಗ ಅವರೇ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಔಷಧಿಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಆದರೆ, ರೋಗಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಈ ರೀತಿ ಸವಲತ್ತುಗಳಿಲ್ಲದೇ ಸೊರಗುತ್ತಿರುವುದು ಆತಂಕ ಸೃಷ್ಟಿಸಿದೆ. ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುವ ಆರೋಪವಿದೆ.