ಶಿರಸಿ: ಜೂನ್ 25 ರಿಂದ ಜುಲೈ 4 ರವರೆಗೆ ನಡೆಯಲಿರುವ SSLC ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಈಗಲೇ ಸಾಕಷ್ಟು ಸಿದ್ಧತಾ ಕಾರ್ಯಗಳು ನಡೆಯುತ್ತಿವೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ 6 ತಾಲೂಕುಗಳಿಂದ ಒಟ್ಟು 10,100 ವಿದ್ಯಾರ್ಥಿಗಳು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ. 35 ಪರೀಕ್ಷಾ ಕೇಂದ್ರಗಳಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುವುದರಿಂದ ಕೊಠಡಿಯಲ್ಲಿ 2 ಅಡಿ ಅಂತರದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲಿದ್ದಾರೆ.
ಕೊರೊನಾ ಹೆಮ್ಮಾರಿಯಿಂದ ಮಕ್ಕಳನ್ನು ರಕ್ಷಿಸಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಇಡಬೇಕಾಗಿದೆ. ಅದರ ಜೊತೆಗೆ ಮಕ್ಕಳಿಗೆ ಮಾಸ್ಕ್ಗಳ ವ್ಯವಸ್ಥೆ ಮಾಡಲಾಗಿದೆ. ಮಾತ್ರವಲ್ಲದೇ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಕಟ್ಟುನಿಟ್ಟಾಗಿ ಆಗಬೇಕು ಎನ್ನುವುದು ಪಾಲಕರ ಒತ್ತಾಯವಾಗಿದೆ. ಅಲ್ಲದೇ ಸರ್ಕಾರ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಂಡಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಧೈರ್ಯದಿಂದ ಕಳಿಸಲು ಸಾಧ್ಯವಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಪಾಲಕರು.
ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕೊರೊನಾ ನಡುವೆಯೇ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಅದಕ್ಕಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಜತೆಗೆ, ವಿದ್ಯಾರ್ಥಿಗಳಿಗೆ ಒಂದು ವೇಳೆ ಪರೀಕ್ಷೆಗೆ ಹಾಜರಾಗುವುದು ವಿಳಂಬವಾದ್ರೆ ಉಂಟಾಗಬಹುದಾದ ಗೊಂದಲ ನಿವಾರಿಸುವ ಕುರಿತ ಕ್ರಮಗಳ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗ್ತಿದೆ.