ಭಟ್ಕಳ : ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಶ್ರೀರಾಮ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳಿಗೆ ಸೂಕ್ತ ಭದ್ರತೆಗೆ ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಕೇಂದ್ರ ಗೃಹ ಸಚಿವರಿಗೆ ಶ್ರೀರಾಮ ಸೇನೆ ಜಿಲ್ಲಾ ಹಾಗೂ ತಾಲೂಕು ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಇತ್ತೀಚೆಗೆ ದೇಶದಲ್ಲಿ ಹಿಂದೂ ನಾಯಕರು ಹಾಗೂ ಕಾರ್ಯಕರ್ತರ ಬರ್ಬರ ಹತ್ಯೆಗಳು ನಡೆಯುತ್ತಿರುವುದು ಆಘಾತಕಾರಿ. ಭಯೋತ್ಪಾದಕರು, ಸಮಾಜಘಾತಕ ದುಷ್ಕರ್ಮಿಗಳು, ದೇಶದ್ರೋಹಿಗಳು ಎಗ್ಗಿಲ್ಲದೆ ಹಾಡಹಗಲೇ ಭಯಾನಕವಾಗಿ ಕೊಲೆ ಮಾಡುತ್ತಿರುವುದು ಅತ್ಯಂತ ಖೇದಕರ. ಕರ್ನಾಟಕದಲ್ಲೂ ಇಂತಹ ಜಾಲಗಳು ಪಸರಿಸಿರುವ ಬಗ್ಗೆ ಆತಂಕವಿದೆ ಎಂದು ಸಂಘದ ಸದಸ್ಯರು ತಿಳಿಸಿದರು.
ಈಗಾಗಲೇ ಪ್ರಮೋದ್ ಮುತಾಲಿಕ್ ಹತ್ಯೆಗೆ ಸುಪಾರಿ ತೆಗೆದುಕೊಂಡ ವಿಷಯ ಬಹಿರಂಗವಾಗಿದೆ. ಅದೇ ರೀತಿ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮೇಲೂ ದಾಳಿ ಸಂಚು ನಡೆದಿರುವ ಬಗ್ಗೆ ಅನುಮಾನಗಳಿವೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಇವರಿಗೆ ಸೂಕ್ತ ಭದ್ರತೆ, ಬೆಂಗಾಲು ಪಡೆ, ಅಂಗರಕ್ಷಕರನ್ನು ನೇಮಿಸುವುದರ ಮೂಲಕ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆಗ್ರಹಿಸಿ ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಚೇರಿಯ ಶಿರಸ್ತೇದಾರ ಎಲ್. ಎ. ಭಟ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಯಂತ ನಾಯ್ಕ, ತಾಲೂಕು ಸಂಘದ ಪ್ರಮುಖರಾದ ರಾಜು ನಾಯ್ಕ, ಶೇಖರ ಡಿ. ಮೋಗೇರ, ಉದಯ ಆರ್. ಮೊಗೇರ, ಕೃಷ್ಣ ಮಾಸ್ತಪ್ಪ ನಾಯ್ಕ, ವೆಂಕಟೇಶ ಖಾರ್ವಿ, ಕೃಷ್ಣ ಖಾರ್ವಿ, ವೆಂಕಟೇಶ ನಾಯ್ಕ ಮುಂತಾದವರು ಇದ್ದರು.