ಕಾರವಾರ: ಕೆಲವು ದಿನಗಳ ಹಿಂದಷ್ಟೇ ತಾವು ಕೂಡ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಘೋಷಿಸಿಕೊಂಡಿದ್ದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೇಕರ್, ಇದೀಗ ತಮ್ಮ ಗುರು ಹಾಗೂ ಹಾಲಿ ಶಾಸಕ ಆರ್. ವಿ. ದೇಶಪಾಂಡೆ ಎದುರೇ ವರಿಷ್ಠರ ಬಳಿ ತಾವೂ ಕೂಡ ಹಳಿಯಾಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಕೆಪಿಸಿಸಿ ವಿಭಾಗ ಮಟ್ಟದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಈ ವೇಳೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಕುರಿತು ಸಮಾಲೋಚನಾ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಈ ನಡುವೆ ಸಭೆಯಲ್ಲಿ ಮಾತನಾಡಿದ ಘೋಟ್ನೇಕರ್ ಕ್ಷೇತ್ರದಲ್ಲಿ ಆಗಿರುವ ಗೊಂದಲದ ಬಗ್ಗೆ ನಾಯಕರ ಮುಂದೆ ಹೇಳಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
"ನಾನು 40 ವರ್ಷದಿಂದ ದೇಶಪಾಂಡೆಯವರ ಜೊತೆ ದುಡಿಯುತ್ತಿದ್ದೇನೆ. ಅವರು ಏನು ಹೇಳುತ್ತಾರೋ ಹಾಗೇ ನಾವು ಕೆಲಸ ಮಾಡುತ್ತಿದ್ದೇನೆ. ಎಪಿಎಂಸಿ ಸೇರಿದಂತೆ ಹಲವೆಡೆ ಹಿಡಿತ ಸಾಧಿಸಿದ್ದೇನೆ. ಆದರೆ ಕೆಲ ದಿನದ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಕಾರ್ಯಕರ್ತರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದು ಅಸಿಂಧು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿರುವುದು ಸರಿಯಲ್ಲ" ಎಂದು ಹೇಳಿರುವುದು ವಿಡಿಯೋದಲ್ಲಿದೆ.
"ನನಗೂ 40 ವರ್ಷದಿಂದ ಪಕ್ಷದಲ್ಲಿ ಏನಿದೆ ಎಂದು ಗೊತ್ತಿದೆ. ಈವರೆಗೂ ಪಕ್ಷಕ್ಕೆ ಯಾರನ್ನೇ ಸೇರ್ಪಡೆ ಮಾಡಿದರೂ ಯಾರೂ ಏನನ್ನೂ ಹೇಳಿರಲಿಲ್ಲ. ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ ನನಗೆ ಬೇಸರ ತಂದಿದೆ. ಮುಂದಿನ ಚುನಾವಣೆಯಲ್ಲಿ ನಾನು ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಿಮ್ಮ ಆಶೀರ್ವಾದ ನನಗೆ ಬೇಕು" ಎಂದು ದೇಶಪಾಂಡೆ ಮುಂದೆಯೇ ಕಾಂಗ್ರೆಸ್ ನಾಯಕರ ಬಳಿ ಘೋಟ್ನೇಕರ್ ಮನವಿ ಮಾಡಿಕೊಂಡಿದ್ದಾರೆ.
ಘೋಟ್ನೇಕರ್ ಹಾಗೂ ದೇಶಪಾಂಡೆ ನಡುವೆ ಇದ್ದ ಮುಸುಕಿನ ಗುದ್ದಾಟ ತೆರೆಮೇಲೆ ಬಂದಿದ್ದು, ಸಾಕಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಘೋಟ್ನೇಕರ್ ಕೆಲವೆಡೆ ತಾನು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು ಎನ್ನಲಾಗಿತ್ತು. ಆದರೆ ದೇಶಪಾಂಡೆಯವರ ಮುಂದೆ ಹೇಳಿರಲಿಲ್ಲ. ಇದೀಗ ಪಕ್ಷದ ಸಭೆಯಲ್ಲಿ ನಾಯಕರುಗಳ ಸಮ್ಮುಖದಲ್ಲಿ ದೇಶಪಾಂಡೆಯವರ ಮುಂದೆಯೇ ತಾನು ಟಿಕೆಟ್ ಆಕಾಂಕ್ಷಿ ಎಂದು ಘೋಟ್ನೇಕರ್ ಮನವಿ ಮಾಡಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದಾರೆ.
ಇಷ್ಟು ದಿನಗಳ ಕಾಲ ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದೇಶಪಾಂಡೆಯವರಿಗೆ ಯಾರು ಎದುರಾಳಿ ಇಲ್ಲದಂತಾಗಿತ್ತು. ಆದರೆ ಈ ಬಾರಿ ಅವರ ಶಿಷ್ಯರಾಗಿದ್ದ ಘೋಟ್ನೇಕರ್ ಅವರೇ ತೊಡೆತಟ್ಟಿ ನಿಂತಿರುವುದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಗೊಂದಲ ಪ್ರಾರಂಭವಾಗಿದೆ.