ಶಿರಸಿ : ಬೆಂಗಳೂರಿನ ಡಿ.ಜಿ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಪುಂಡರು ದಾಳಿ ಮಾಡಿ ಗಲಭೆಯಲ್ಲಿ ಮೂರು ಜನರು ಮೃತಪಟ್ಟ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಯತ್ನದ ಮೇಲೆ 20 ಜನರನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಶಿರಸಿ ನಗರದ ಕೆಲವು ಸಂಘಟನೆಯ ಪುಂಡರು ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆಪ್ ಮತ್ತು ಫೇಸ್ಬುಕ್ ಗ್ರೂಪ್ ಗಳಲ್ಲಿ ಧಾರ್ಮಿಕ ಮತ್ತು ಕೊಮು ಭಾವನೆಗಳಿಗೆ ಧಕ್ಕೆ ತರುವಂತಹ ಸಮಾಜದಲ್ಲಿ ಶಾಂತಿಯನ್ನು ಕದಡುವಂತಹ ಸಂದೇಶಗಳನ್ನು ಹರಿ ಬಿಡುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಅಶಾಂತಿ, ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ 20 ಜನರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಸಿಪಿಐ ಪ್ರದೀಪ್ ಬಿ.ಯು ಹಾಗೂ ಹೊಸ ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ಮತ್ತು ನಗರ ಠಾಣೆ ಪಿ.ಎಸ್ ಐ ಶಿವಾನಂದ ನಾವಡಗಿ ಅವರು ತೀವ್ರ ವಿಚಾರಣೆಗೆ ಒಳಪಡಿಸಿ, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಕ್ರಮ ಕೈಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಕೋಮು ಸೌಹಾರ್ದತೆಗೆ ಹಾಗೂ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹ ಮತ್ತು ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ, ಪ್ರಚೋದನಾಕಾರಿ ಹೇಳಿಕೆ, ಸಂದೇಶ, ವಿಡಿಯೋ ಹರಿಬಿಟ್ಟಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿರಸಿ ಉಪವಿಭಾಗದ ಡಿ.ವೈ.ಎಸ್.ಪಿ ಗೋಪಾಲ ಕೃಷ್ಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.