ಕಾರವಾರ: ಪುರಾಣ ಪ್ರಸಿದ್ಧ ಸ್ಥಳಗಳಲ್ಲಿ ಇಡಗುಂಜಿ ಕ್ಷೇತ್ರವೂ ಒಂದು. ಇಲ್ಲಿ ಗಣೇಶ ಚತುರ್ಥಿ ಬಂದರೆ ಸಾಕು ಸಾವಿರಾರು ಭಕ್ತರು ಆಗಮಿಸಿ ಮಹಾಗಣಪನಿಗೆ ವಿಶೇಷ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಹೆಮ್ಮಾರಿ ಸಂಭ್ರಮಕ್ಕೆ ಕಡಿವಾಣ ಹಾಕಿದೆ.
ಸದ್ಯ ಗಣೇಶ ಹಬ್ಬದ ಸಂದರ್ಭವಾಗಿರುವುದರಿಂದ ವಿವಿಧ ಸೇವೆಗಳು ದೇವಸ್ಥಾನದಲ್ಲಿ ನಡೆಯುತ್ತಿದ್ದವು. ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ. ಹೀಗಾಗಿ, ದೇವಾಲಯದಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಒದಗಿಸಲಾಗಿದೆ. ಎಲ್ಲ ರೀತಿಯ ಹಣ್ಣುಕಾಯಿ, ಪ್ರಸಾದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಂಪ್ರದಾಯದಂತೆ ಸರಳವಾಗಿ ಗಣೇಶೋತ್ಸವ ನಡೆಸಲಾಗುವುದು ಎಂದು ಅರ್ಚಕರು ತಿಳಿಸಿದ್ದಾರೆ.
ಶರಾವತಿ ತಟದಲ್ಲಿ ಈ ಬಾಲ ಗಣಪತಿ ಭಕ್ತರ ಆರಾಧ್ಯ ದೈವವಾಗಿ ಪ್ರಸಿದ್ದಿ ಪಡೆದಿದೆ. ಇಲ್ಲಿನ ದ್ವಿಭುಜ ಗಣಪತಿಗೆ ಎರಡು ದಂತಗಳಿವೆ. ಅಲ್ಲದೆ, ಸುಮಾರು 1,500 ವರ್ಷದ ಹಿಂದಿನ ಕಪ್ಪು ಶಿಲೆಯ ಗಣಪತಿ ಮೂರ್ತಿಯನ್ನು ಈಗಲೂ ಇಲ್ಲಿ ಪೂಜಿಸಲಾಗುತ್ತಿದೆ.
ಗಣಪತಿ ದೇವರಿಗೆ ಪಂಚಕಜ್ಜಾಯ ಅಂದ್ರೆ ಇಷ್ಟದ ನೈವೇದ್ಯ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಪಂಚಕಜ್ಜಾಯವನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಈ ದೇವಸ್ಥಾನಕ್ಕೆ ಸ್ಥಳೀಯರನ್ನು ಹೊರತುಪಡಿಸಿ ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ಆಗಮಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಆದರೆ, ಈ ಬಾರಿ ಕೊರೊನಾ ಆತಂಕ ವಿಘ್ನೇಶ್ವರ ಸಂಭ್ರಮಕ್ಕೂ ಅಡ್ಡಿಪಡಿಸಿದೆ. ಹೀಗಾಗಿ, ಸರಳವಾಗಿ ಹಬ್ಬ ಆಚರಣೆ ಮಾಡಬೇಕಾಗಿದ್ದು ಭಕ್ತರು ದೇವರ ದರ್ಶನ ಪಡೆದುಕೊಂಡು ವಾಪಸ್ಸಾಗುತ್ತಿದ್ದಾರೆ.
ಇದನ್ನೂ ಓದಿ: ಛಬ್ಬಿ ಗಣಪತಿಗೂ ತಟ್ಟಿದ ಕೊರೊನಾ ಬಿಸಿ: ಸರಳ ಆಚರಣೆಗೆ ಗ್ರಾ.ಪಂಚಾಯತಿ ಠರಾವ್