ಶಿರಸಿ: ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ತವರು ಕ್ಷೇತ್ರ ಸಿದ್ದಾಪುರದಲ್ಲಿನ ಹೊಸ ಬಸ್ ನಿಲ್ದಾಣದ ಕಾಮಗಾರಿಯು ತೆವಳುತ್ತಲ್ಲೆ ಸಾಗುತ್ತಿದೆ. ಕಾಮಗಾರಿ ಆರಂಭಗೊಂದು ಮೂರು ವರ್ಷ ಪೂರೈಸಿದ್ದರೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜನರಿಗೆ ಅನುಕೂಲವಾಗಲೆಂದು ಹೊಸ ಬಸ್ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ, ನಿಲ್ದಾಣದ ಕಾಮಗಾರಿ ಆರಂಭವಾಗಿ 3 ವರ್ಷ ಕಳೆದರೂ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಹಳೆ ಬಸ್ ನಿಲ್ದಾಣದಲ್ಲಿ ಜನ ನಿಲ್ಲಲು ಆಗದಂತಹ ಅವ್ಯವಸ್ಥೆಯಿಂದ ಕೂಡಿದೆ. ಒಂದೆಡೆ ಕಟ್ಟಡ ಮಳೆ ನೀರಿನಿಂದ ಸೋರುತ್ತಿದ್ದು, ಸ್ವಲ್ಪವೇ ಮಳೆ ಸುರಿದರು ಬಸ್ ನಿಲ್ದಾಣವೇ ಕೆಸರು ಗದ್ದೆಯಂತಾಗುತ್ತದೆ. ನಿಲ್ದಾಣದ ಒಳಗಡೆ ಸಹ ನೀರು ಸೋರುತ್ತದೆ. ಇನ್ನು ಶೌಚಾಲಯ ಸಾಂಕ್ರಮಿಕ ರೋಗಗಳ ವಾಸ ಸ್ಥಾನವಾಗಿದೆ. ನೂತನ ಬಸ್ ನಿಲ್ದಾಣದ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಸಾರ್ವಜನಿಕರು ಗುತ್ತಿಗೆದಾರರನ್ನು ಮನವಿ ಮಾಡಿದ್ದಾರೆ.