ಭಟ್ಕಳ: ಚಿಕ್ಕಮಗಳೂರಿನ ದತ್ತಪೀಠ ಮುಕ್ತಿಗಾಗಿ ಒಂದು ಕೋಟಿ ಜಪ ಯಜ್ಞವನ್ನು ಜುಲೈ 5 ರಂದು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಶ್ರೀ ರಾಮಸೇನಾ ಜಿಲ್ಲಾಧ್ಯಕ್ಷ ಜಯಂತ ನಾಯ್ಕ ಹೇಳಿದರು.
ನಗರದ ಶ್ರೀ ನಾಗಮಾಸ್ತಿ ದೇವಸ್ಥಾನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ತಕ್ಷಣ ಹಿಂದೂಗಳಿಗೆ ದತ್ತಪೀಠ ಎಂದು ಕ್ಯಾಬಿನೆಟ್ ನಿರ್ಣಯ ಮಾಡಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಬೇಕು. ದತ್ತಪೀಠ ಹಿಂದೂಗಳದ್ದು, ಬಾಬಾ ಬುಡನ್ ದರ್ಗಾ ದತ್ತಪೀಠದಿಂದ 14 ಕಿ.ಮೀ. ದೂರದಲ್ಲಿರುವ ನಾಗೇನಹಳ್ಳಿಯಲ್ಲಿದೆ ಎನ್ನುವುದನ್ನು ಸ್ಪಷ್ಟಪಡಿಸಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ವಿವಾದವನ್ನು ಶೀಘ್ರ ಇತ್ಯರ್ಥ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ದತ್ತ ಪೀಠದಲ್ಲಿ ಹೋರಾಟ ನಡೆಸಬೇಕಾಗುತ್ತದೆ. ಒಂದು ಕೋಟಿ ಜಪ ನಂತರ ಕೊರೊನಾ ಸ್ಥಿತಿಗತಿಗೆ ಅನುಗುಣವಾಗಿ ಚಿಕ್ಕಮಗಳೂರಿನಲ್ಲಿಯೇ 51 ಹೋಮ ಕುಂಡಗಳಲ್ಲಿ ಬೃಹತ್ ಸಾಂಗತ ಯಜ್ಞ ಹಾಗೂ ರಾಷ್ಟ್ರ, ರಾಜ್ಯ ಮಟ್ಟದ ಹಿಂದೂ ನಾಯಕರ, ನಾಗ ಸಾಧುಗಳ ನೇತೃತ್ವದಲ್ಲಿ ಬೃಹತ್ ಧರ್ಮ ಸಭೆ ನಡೆಸಲಾಗುವುದು ಎಂದು ತಿಳಿಸಿದರು.