ಕಾರವಾರ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ 'ಅನ್ನದಂಗಳದಲ್ಲಿ ಮಾತುಕತೆ' ಕಾರ್ಯಕ್ರಮ ನಿಮಿತ್ತ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಕೈಗಡಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದರು.
ದೇಶದ ಬೆನ್ನೆಲುಬಾದ ಕೃಷಿಕರ ಸಂಕಷ್ಟಗಳನ್ನ ಸರ್ಕಾರಕ್ಕೆ ಮುಟ್ಟಿಸಬೇಕು ಎನ್ನುವ ಸದುದ್ದೇಶದಿಂದ 'ಅನ್ನದಂಗಳದಲ್ಲಿ ಮಾತುಕತೆ' ಎನ್ನುವ ವಿನೂತನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಆಗಮಿಸಿದ್ದರು. ಗುಳ್ಳಾಪುರ ಸೇತುವೆ ಕುಸಿದಿರುವ ಹಿನ್ನೆಲೆಯಲ್ಲಿ ಗುಳ್ಳಾಪುರದಿಂದ ಶೇವ್ಕಾರಗೆ ಬೋಟ್‌ನಲ್ಲಿ ಪ್ರಯಾಣಿಸಿ ಗಂಗಾವಳಿ ನದಿ ದಾಟಿದರು. ನಂತರ ನಡೆದುಕೊಂಡೇ ಕೈಗಡಿ ಗ್ರಾಮ ತಲುಪಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ವೇಳೆ ಗ್ರಾಮಸ್ಥರು ಸಚಿವರನ್ನ ಗ್ರಾಮೀಣ ಸಂಪ್ರದಾಯದಂತೆ ಆರತಿ ಬೆಳಗಿ ತಿಲಕ ಇಡುವ ಮೂಲಕ ಬರಮಾಡಿಕೊಂಡರು. ತೆಂಗಿನ ತೆನೆ ಬಿಡಿಸುವ ಮೂಲಕ ಕಾರ್ಯಕ್ರಮವನ್ನ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದ್ದು, ಬಳಿಕ ರೈತರೊಂದಿಗೆ ಸಂವಾದ ನಡೆಸಿದರು.
ಸಂವಾದದ ಬಳಿಕ ಮಾತನಾಡಿದ ಸಚಿವೆ ಕರಂದ್ಲಾಜೆ, ಕೃಷಿ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಲು ಈ ಕಾರ್ಯಕ್ರಮ ಸಹಾಯವಾಗಿದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮನೆಯಂಗಳದಲ್ಲಿ ಕಾರ್ಯಕ್ರಮ:
ಸಾವಯವ ಕೃಷಿ ಮಿಷನ್‌ನ ರಾಜ್ಯಾಧ್ಯಕ್ಷ ಆನಂದ್ ಆಶ್ರಿ ಹಾಗೂ ಕೃಷಿ ಇಲಾಖೆ ವತಿಯಿಂದ ಗ್ರಾಮದ 'ಮನೆಯಂಗಳದಲ್ಲಿ ಕಾರ್ಯಕ್ರಮ'ವನ್ನ ಆಯೋಜಿಸಲಾಗಿತ್ತು. ಸುತ್ತಲಿನ ಹತ್ತಾರು ಗ್ರಾಮಗಳಿಂದ ಐನೂರಕ್ಕೂ ಅಧಿಕ ರೈತರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಸಚಿವರ ಎದುರು ಕೃಷಿಗೆ ಸಂಬಂಧಿಸಿದ 25ಕ್ಕೂ ಅಧಿಕ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಪರಿಕರಗಳು ಹಾಗೂ ವಿವಿಧ ಕೃಷಿ ಉತ್ಪನ್ನಗಳ ಪ್ರದರ್ಶನವನ್ನ ಸಹ ಏರ್ಪಡಿಸಿದ್ದು, ಕೃಷಿಕರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿದ್ದಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವರು ತಮ್ಮ ಕುಗ್ರಾಮಕ್ಕೆ ಆಗಮಿಸಿ ರೈತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದಕ್ಕೆ ಕೃಷಿಕರು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ರೈತರು ಮಂಡಿಸಿದ ಸಮಸ್ಯೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವ ವಿಶ್ವಾಸ ಇದೆ ಎಂದರು.
ಒಟ್ಟಾರೆ ರಸ್ತೆ, ಸೇತುವೆಯಿಲ್ಲದ ಗ್ರಾಮಕ್ಕೆ ಸಚಿವರ ಆಗಮನ ಕೃಷಿಕರಿಗೆ ಹೊಸ ಹುಮ್ಮಸ್ಸು ತುಂಬಿರುವುದಂತೂ ಸತ್ಯ.