ಕಾರವಾರ: ಗೆಲುವಿನ ಬಗ್ಗೆ ಮೊದಲೇ ನಿರೀಕ್ಷೆ ಇತ್ತು. ಮಾಧ್ಯಮದವರೇ ಈ ಬಗ್ಗೆ ನಂಬಲು ತಯಾರಿರಲಿಲ್ಲ. ಆದರೆ, ವಾಸ್ತವ ಬೇರೆಯೇ ಇತ್ತು ಎಂದು ಯಲ್ಲಾಪುರ ಕ್ಷೇತ್ರದ ವಿಜೇತ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಹದಿನೈದು ವರ್ಷಗಳಲ್ಲಿ ಕ್ಷೇತ್ರದ ಜನರ ನರನಾಡಿ ಗೊತ್ತಿದೆ. ಕ್ಷೇತ್ರದ ಪರಿಸ್ಥಿತಿ ಅರಿತಿದ್ದೇನೆ. ಕಾರ್ಯಕರ್ತರ ಪಡೆ, ರಾಜ್ಯ ನಾಯಕರು, ಮುಖಂಡರು ನನಗಾಗಿ ಹಗಲಿರುಳು ದುಡಿದಿದ್ದಾರೆ ಎಂದರು.
ಕ್ಷೇತ್ರದ ಅಭ್ಯುದಯ, ಅಭಿವೃದ್ಧಿ, ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಬೇಕೆಂದು ಜನತಾ ಜನಾರ್ಧನ ಮತ್ತೊಮ್ಮೆ ತೀರ್ಪು ನೀಡಿದ್ದಾನೆ. ಯಾರು ಅನರ್ಹ ಎಂದು ತೀರ್ಪು ನೀಡಿದ್ದರೋ ಅವರಿಗೆ ನಾನು ಅನರ್ಹ ಅಲ್ಲ ಎಂದು ಕ್ಷೇತ್ರದ ಜನರು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ನನ್ನನ್ನು ಸೋಲಿಸಲು ರಾಜ್ಯದ ಕಾಂಗ್ರೆಸ್ ಪಡೆ, ಮಾಜಿ ಮುಖ್ಯಮಂತ್ರಿ, ಜಿಲ್ಲೆಯಲ್ಲಿ ಮೂರು ದಶಕಗಳ ಕಾಲ ರಾಜಕಾರಣ ಮಾಡಿಕೊಂಡು ಬಂದವರು ಹಗಲಿರುಳು ಶ್ರಮಿಸಿದ್ದಾರೆ. ಅವರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದರು.
ಇದೊಂದು ರಾಜಕಾರಣ, ಕಾಂಗ್ರೆಸ್ನ ಅಭ್ಯರ್ಥಿ ಭೀಮಣ್ಣ ನಾಯ್ಕ ವೈಯಕ್ತಿಕವಾಗಿ ನನ್ನ ಸ್ನೇಹಿತ. ಅವರು ಇದನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಲಿ. ಮಾದರಿ ಕ್ಷೇತ್ರವನ್ನು ಮಾಡಬೇಕೆನ್ನುವುದೇ ನಮ್ಮ ಉದ್ದೇಶ. ಮತದಾರರಿಗೆ ಕರೆ ಕೊಟ್ಟಿದ್ದೆ, ರಾಜ್ಯದಲ್ಲಿ ಅತಂತ್ರ ಸರ್ಕಾರವನ್ನು ಯಾವುದೇ ಕಾರಣಕ್ಕೂ ತರಬೇಡಿ ಎಂದು. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಸುಭದ್ರ ಸರ್ಕಾರ ಇರಲಿದ್ದು, ಉತ್ತಮ ಆಡಳಿತ ನೀಡಲಿದೆ ಎಂದು ಹೇಳಿದರು.