ಶಿರಸಿ: ಕಾಂಗ್ರೆಸ್ ಮತ್ತು ಜೆಡಿಎಸ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿರುವ 17 ಜನ ಶಾಸಕರು ಎಲ್ಲರೂ ಜೊತೆಯಾಗಿದ್ದೇವೆ. ಹಾಗಾಗಿ ಹಿರಿಯರಾದ ಹೆಚ್ ವಿಶ್ವನಾಥ್ ಅವರು ಮಂತ್ರಿ ಮಾಡುವವರೆಗೆ ತಾಳ್ಮೆ ಕಳೆದುಕೊಳ್ಳಬಾರದು ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಓದಿ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವೆ: ಎಚ್.ವಿಶ್ವನಾಥ್
ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಉದ್ದೇಶದಿಂದ ಬಿಜೆಪಿಗೆ ಬಂದಿರುವ ಎಲ್ಲರೂ ಇಂದು, ನಾಳೆ ಯಾವಾಗಲೂ ಜೊತೆಯಾಗಿ ಇರುತ್ತೇವೆ. ಅಲ್ಲದೇ ವಿಶ್ವನಾಥ್ ಅವರು ಚುನಾವಣೆಯಲ್ಲಿ ಸೋತರೂ ಬಿಜೆಪಿ ಪರಿಷತ್ ಸದಸ್ಯರನ್ನಾಗಿ ಮಾಡಿದೆ ಎಂದರು.
ಬಿಜೆಪಿ ವಿಶ್ವನಾಥ್ ಅವರನ್ನು ಮಂತ್ರಿ ಮಾಡುವುದನ್ನು ಅಲ್ಲಗಳೆದಿಲ್ಲ. ನ್ಯಾಯಾಲಯದಲ್ಲಿ ಅವರ ವಿರುದ್ಧ ತೀರ್ಪು ಬಂದಿದೆ. ಇದರಿಂದ ವಿಶ್ವನಾಥ್ ಅವರು ಅಸಮಧಾನದಿಂದ ಮಾತನಾಡಿದ್ದಾರೆ. ನಾವೆಲ್ಲರೂ ನಿಮ್ಮ ಜೊತೆಯಲ್ಲಿದ್ದೇವೆ ಎಂದು ಸಂದೇಶ ನೀಡಿದರು.
ಹೆಚ್ ವಿಶ್ವನಾಥ್ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಬಂದವರು. ಅವರು ಹಿರಿಯರು. ಆದ ಕಾರಣ ತಾಳ್ಮೆ ಕಳೆದುಕೊಳ್ಳಬಾರದು. ಅದು ಒಳ್ಳೆಯ ಸಂಪ್ರದಾಯವೂ ಅಲ್ಲ. ತಾಳ್ಮೆಯಿಂದ ಇರಿ ಎಂದು ಸಲಹೆಯನ್ನೂ ನೀಡಿದರು.