ಶಿರಸಿ: ನಾವು ಸಚಿವರಾಗುವುದು ವಿಳಂಬ ಆಗಿರುವುದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದು ಯಾವುದೇ ತಪ್ಪಿಲ್ಲ. ಬದಲಾಗಿ ನಮ್ಮ ಸಮಯ ಸರಿಯಿಲ್ಲದೇ ತಡವಾಗುತ್ತಿದೆ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.
ತಾಲೂಕಿನ ಬಿಸ್ಲಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಕ್ಕಂಬಿಯಲ್ಲಿ ಕುಡಿಯುವ ನೀರಿನ ಟ್ಯಾಂಕಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಈಟಿವಿ ಭಾರತನೊಂದಿಗೆ ಮಾತನಾಡಿದರು. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈ ತಿಂಗಳ 17 ಅಥವಾ 18 ರಂದು ಆಗಬಹುದು. ಈ ಕುರಿತು ಸಿಎಂ ಯಡಿಯೂರಪ್ಪ ಮಾಧ್ಯಮಗಳ ಮೂಲಕವೇ ತಿಳಿಸಿದ್ದಾರೆ ಎಂದರು.
ರಾಜಕಾರಣದಲ್ಲಿ ಆಸೆಗೆ ಒಂದು ಮಿತಿ ಇರಬೇಕು. ಕಾರ್ಯಕರ್ತರಿದ್ದಾಗ ಶಾಸಕಾರಬೇಕು, ಶಾಸಕರಾದ ಮೇಲೆ ಸಚಿವರಾಗಬೇಕು, ಸಚಿವರಾದ ಮೇಲೆ ಉತ್ತಮ ಖಾತೆ ಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲಾ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರು ಈಡೇರಿಸಲು ಸಾಧ್ಯವಿಲ್ಲ. ನಮ್ಮ ಶಕ್ತಿ ಸಾಮರ್ಥ್ಯ ನೋಡಿ ಸೂಕ್ತ ಸ್ಥಾನಮಾನ ನೀಡುತ್ತಾರೆ ಎಂದು ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದರು.