ಶಿರಸಿ: ಬಿಜೆಪಿಯಿಂದ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವ ಶಿವರಾಮ್ ಹೆಬ್ಬಾರ್ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ, ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಹೆಬ್ಬಾರ್ಗೆ ಮಂತ್ರಿಸ್ಥಾನ ಖಾತ್ರಿಯಾಗಿರುವ ಕಾರಣ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಯಾವ ಖಾತೆ ಸಿಗಬಹುದು ಎಂಬುದರ ಕುರಿತೂ ಚರ್ಚಿಸಿದ್ದು, ಪ್ರಭಾವಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಕಳೆದೆರಡು ದಿನಗಳಿಂದ ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕರು ಮುಖ್ಯಮಂತ್ರಿಯನ್ನು ಭೇಟಿಯಾಗುತ್ತಿದ್ದು, ಇಂದು ಹೆಬ್ಬಾರ್, ಯಡಿಯೂರಪ್ಪ ಅವರ ಸ್ವಗೃಹದಲ್ಲಿ ಭೇಟಿಯಾಗಿ ಪುಷ್ಪಗುಚ್ಚ ನೀಡಿದ್ದಾರೆ. ಎರಡು ದಿನಗಳ ಕಾಲ ಕ್ಷೇತ್ರ ಪ್ರವಾಸ ಮಾಡಿರುವ ಅವರು, ಬಿಡುವು ಮಾಡಿಕೊಂಡು ಖಾತೆಯ ಕುರಿತು ಚರ್ಚಿಸಲು ಬೆಂಗಳೂರಿಗೆ ಹೋಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.