ಕಾರವಾರ : ಡಿಸೆಂಬರ್ ತಿಂಗಳು ಬಂತೆಂದರೆ ಸಾಕು ಆ ಕಡಲತೀರದಲ್ಲಿ ಹಕ್ಕಿಗಳ ಕಲರವವೇ ಒಂದು ಆಕರ್ಷಣೆ. ಬೀಚ್‌ನುದ್ದಕ್ಕೂ ಕಂಡುಬರುವ ವಿಶೇಷ ಪಕ್ಷಿಸಂಕುಲ ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಸಾವಿರಾರು ಕಿಲೋಮೀಟರ್ ದೂರದಿಂದ ವಲಸೆ ಬರುವ ವಿದೇಶಿ ಬಾನಾಡಿಗಳನ್ನು ನೋಡುವುದೇ ಆನಂದ. ಅಷ್ಟಕ್ಕೂ ಆ ಪಕ್ಷಿಗಳು ಯಾವುವು. ಅವುಗಳು ಕಂಡುಬರೋದಾದ್ರೂ ಎಲ್ಲಿ ಅಂತೀರಾ. ಈ ಕುರಿತು ಒಂದು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಉತ್ತರಕನ್ನಡ ಜಿಲ್ಲೆಯ ಕರಾವಳಿ ನಗರಿ ಕಾರವಾರದಲ್ಲಿಮ, ಪ್ರತಿವರ್ಷ ಡಿಸೆಂಬರ್, ಜನವರಿ ತಿಂಗಳು ಬಂತೆಂದರೆ ಸಾಕು ವಿದೇಶದಿಂದ ವಲಸೆ ಬರುವ ಸೀಗಲ್ ಪಕ್ಷಿಗಳು ಕಡಲತೀರದಲ್ಲಿ ತುಂಬಿಕೊಳ್ಳುತ್ತವೆ. ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಪಕ್ಷಿಧಾಮದಂತೆ ಮಾರ್ಪಾಡಾಗುವುದು ನೋಡುಗರ ಕಣ್ಣಿಗೆ ಹಬ್ಬದಂತೆ ಕಾಣುತ್ತದೆ.
ಕಾರವಾರದಲ್ಲಿ ವಿದೇಶಿ ಪಕ್ಷಿಗಳು : ಮೂಲತಃ ರಷ್ಯಾ ಭಾಗದ ಸೀಬರ್ಡ್ ಪಕ್ಷಿಗಳು ದಶಕಗಳಿಂದಲೂ ಕಾರವಾರದ ಕಡಲತೀರಕ್ಕೆ ಪ್ರತಿವರ್ಷ ವಲಸೆ ಬರುತ್ತವೆ. ಕಡಲತೀರದ ಬಳಿ ಸಮುದ್ರದಲ್ಲಿ ನಿಲ್ಲುವ ನಾಡದೋಣಿಗಳು ಹಾಗೂ ಸಮುದ್ರದಲ್ಲಿ ಕುಳಿತುಕೊಳ್ಳುವ ಪಕ್ಷಿಗಳ ಸಾಲು ಕಡಲತೀರಕ್ಕೆ ಬರುವ ಪ್ರವಾಸಿಗರನ್ನೂ ಆಕರ್ಷಿಸುತ್ತವೆ. ಅಲ್ಲದೇ ಹಚ್ಚಹಸಿರಿನ ಮರಗಳ ಮೇಲೆ ಸಾಲು ಸಾಲಾಗಿ ಕುಳಿತುಕೊಳ್ಳುವ ಬೆಳ್ಳಕ್ಕಿಗಳ ಹಿಂಡು ಬೆಳ್ಳನೆಯ ಹೊದಿಕೆ ಹೊದಿಸಿದಂತೆ ಕಾಣುತ್ತದೆ.
ಹೀಗಾಗಿ ಕಡಲತೀರವನ್ನ ನೋಡಿ, ಇಲ್ಲಿನ ಸಮುದ್ರದಲ್ಲಿ ಈಜಾಡಿ ಎಂಜಾಯ್ ಮಾಡಿ ತೆರಳುತ್ತಿದ್ದು, ಪ್ರವಾಸಿಗರು ಇದೀಗ ಪಕ್ಷಿಗಳ ಸಮೂಹವನ್ನೂ ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ವಲಸೆ ಬರುವ ಸೀಗಲ್‌ಗಳ ಸಂಖ್ಯೆ ಕೊಂಚ ಕಡಿಮೆಯಾಗಿತ್ತಾದರೂ ಈ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿರೋದು ಪ್ರವಾಸಿಗರನ್ನ ಸೆಳೆಯುತ್ತಿದೆ.
Karwar birds attraction tourists : ಇನ್ನು ಪ್ರತಿವರ್ಷ ನವೆಂಬರ್ ತಿಂಗಳಿನಿಂದ ಸೀಗಲ್ ಎಂದು ಕರೆಯುವ ಸೀಬರ್ಡ್ ಪಕ್ಷಿಗಳು ಹಾಗೂ ಬೆಳ್ಳಕ್ಕಿಗಳು ಕಡಲತೀರಕ್ಕೆ ವಲಸೆ ಬರುತ್ತವೆ. ರಷ್ಯಾದಿಂದ ಹಾರಿಬರುವ ಈ ಪಕ್ಷಿಗಳು ಚಳಿಗಾಲದ ಎರಡು ಮೂರು ತಿಂಗಳ ಕಾಲ ಕಾರವಾರದಲ್ಲಿ ಬೀಡು ಬಿಟ್ಟು ಬಳಿಕ ಟಿಬೇಟ್ ಭಾಗದತ್ತ ಮರಿಗಳನ್ನ ಮಾಡಲು ತೆರಳುತ್ತಿದ್ದವು. ರಾಜ್ಯದ ಕರಾವಳಿಯಲ್ಲಿ ವಿಶೇಷವಾಗಿ ಕಾರವಾರದ ಕಡಲತೀರ ಪ್ರದೇಶದಲ್ಲಿಯೇ ಇವು ಹೆಚ್ಚಾಗಿ ಕಾಣಸಿಗುವುದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಒಂದು ಆಕರ್ಷಣೆಯಾಗಿದೆ. ಹೀಗಾಗಿ ಈ ಅವಧಿಯಲ್ಲಿ ಬಾನಾಡಿಗಳಿಂದ ತುಂಬಿರುವ ಕಡಲತೀರ ಪಕ್ಷಿ ಪ್ರೇಮಿಗಳಿಗೆ, ವೈಲ್ಡ್‌ಲೈಫ್ ಫೋಟೋಗ್ರಾಫರ್‌ಗಳಿಗೆ ಈ ವಿಶಿಷ್ಟ ಪಕ್ಷಿಗಳ ವೀಕ್ಷಣೆಗೆ ಉತ್ತಮ ಅವಕಾಶ ಒದಗಿಸುತ್ತದೆ.
ಈ ಹಿಂದೆ ಸಾವಿರ ಸಂಖ್ಯೆಯಲ್ಲಿ ಕಂಡುಬರುತ್ತಿದ್ದ ಈ ಸೀಗಲ್ ಪಕ್ಷಿಗಳನ್ನ ನೋಡಿಯೇ ಕಾರವಾರದ ಕದಂಬ ನೌಕಾನೆಲೆ ಯೋಜನೆಗೆ ಸೀಬರ್ಡ್ ಎಂದು ಹೆಸರಿಡಲಾಗಿತ್ತು. ಇನ್ನು ಕಳೆದೆರಡು ವರ್ಷಗಳಲ್ಲಿ ಉಂಟಾದ ನೆರೆ ಹಾಗೂ ಮತ್ಸ್ಯಕ್ಷಾಮದಿಂದಾಗಿ ಸೀಬರ್ಡ್ ಪಕ್ಷಿಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಎನ್ನಲಾಗಿದೆ. ಆಹಾರ ಸಿಗುವ ಪ್ರಮಾಣ ಕಡಿಮೆಯಾಗಿದ್ದರಿಂದ ಕಳೆದ ವರ್ಷ ಸೀಗಲ್‌ಗಳು ಬೇರೆಡೆಗೆ ತೆರಳಿದ್ದವಾದರೂ ಈ ಬಾರಿ ಮತ್ತೆ ಟ್ಯಾಗೋರ್ ಕಡಲತೀರಕ್ಕೆ ಭೇಟಿ ನೀಡಿದ್ದು ವಿಶೇಷವಾಗಿ ಕಾರವಾರಕ್ಕೆ ಕಂದು ಹಾಗೂ ಕಪ್ಪು ಬಣ್ಣ ಮಿಶ್ರಿತ ಸೀಗಲ್‌ಗಳು ಆಗಮಿಸುತ್ತವೆ ಅಂತಾರೇ ಪಕ್ಷಿ ಅಧ್ಯಯನಕಾರರು.
ಒಟ್ಟಾರೇ ಚಳಿಗಾಲದಲ್ಲಿ ವಲಸೆ ಬಂದು ಟ್ಯಾಗೋರ್ ಕಡಲತೀರದಲ್ಲಿ ಬೀಡುಬಿಡುವ ಸೀಗಲ್ ಪಕ್ಷಿಗಳು ಕಡಲತೀರದ ಅಂದವನ್ನ ಹೆಚ್ಚಿಸಿರೋದಂತೂ ಸತ್ಯ. ನೀವೂ ಸಹ ಈ ಬಾನಾಡಿಗಳನ್ನ ಕಣ್ತುಂಬಿಕೊಳ್ಳಬೇಕು ಅಂದ್ರೆ ಕಾರವಾರ ಕಡಲತೀರಕ್ಕೊಮ್ಮೆ ಭೇಟಿ ನೀಡಿ.