ಭಟ್ಕಳ: ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ತಕ್ಷಣ 5 ತಿಂಗಳ ಗೌರವಧನ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮನವಿ ಸಲ್ಲಿಸಿದೆ.
ಈ ಮನವಿಯಲ್ಲಿ ರಾಜ್ಯಾದ್ಯಂತ ಇರುವ 54 ಸಾವಿರ ಶಾಲೆಗಳಲ್ಲಿ ದಾಸೋಹ ಯೋಜನೆಯಲ್ಲಿ ಒಟ್ಟು 1.70 ಲಕ್ಷ ಮಂದಿ ಅಡುಗೆಯವರು ಹಾಗೂ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗಕ್ಕೆ ಸರ್ಕಾರ ಕಳೆದ ಐದು ತಿಂಗಳಿಂದ ಗೌರವಧನ ನೀಡದೇ ಇರುವುದು ಅತ್ಯಂತ ಖೇದಕರ. ಈಗಾಗಲೇ ಲಾಕ್ಡೌನ್ನಿಂದಾಗಿ ಇತರೆ ಬೇರೆ ಕೆಲಸ ಸಹ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಈ ಸಿಬ್ಬಂದಿಗೆ ಗೌರವಧನ ನೀಡದಿರುವುದರಿಂದ ಅವರ ಜೀವನ ಅಸ್ತವ್ಯಸ್ತವಾಗಿದೆ ಎಮದು ಎಸ್‌ಡಿಪಿಐ ತಾಲೂಕು ಅಧ್ಯಕ್ಷ ವಸೀಮ್ ಮನಗಾರ್ ಹೇಳಿದ್ರು.
ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಡಿ ಗ್ರೂಪ್ ನೌಕರರ ಸಂಖ್ಯೆ ಕಡಿಮೆಯಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಡುಗೆಯವರು ಹಾಗೂ ಅಡುಗೆ ಸಹಾಯಕರಿಗೆ ತಮ್ಮ ಅಡುಗೆ ಕೆಲಸದ ಜೊತೆ ಶಾಲೆ ಸ್ವಚ್ಛತೆ ಮತ್ತು ಇತರೆ ಕೆಲಸ ಸಹ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಹೀಗೆ ಶಾಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿಗೆ ಸರ್ಕಾರ ಅವರ ಸೇವೆಗೆ ತಕ್ಕ ಪ್ರತಿಫಲ ನೀಡಬೇಕಾಗಿದೆ. ಈ ಕೂಡಲೇ ಕಳೆದ 5 ತಿಂಗಳಿಂದ ಗೌರವಧನವನ್ನು ಏಕಕಾಲಕ್ಕೆ ಪಾವತಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಪಕ್ಷದ ಜಿಲ್ಲಾ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.