ಕಾರವಾರ/ಉತ್ತರಕನ್ನಡ : ಲಾಕ್ಡೌನ್ನಿಂದಾಗಿ ಜಿಲ್ಲೆಯ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಅವಕಾಶ ಕಲ್ಪಿಸಬೇಕು ಅಂತಾ ಉತ್ತರಕನ್ನಡ ಕಾಂಗ್ರೆಸ್ ಟಾಸ್ಕ್‌ಫೋರ್ಸ್ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಒತ್ತಾಯಿಸಿದ್ದಾರೆ.
ಅಂಕೋಲಾ ತಾಲೂಕಿನ ಬೆಳಾಂಬರ, ತೆಂಕಣಕೇರಿ, ಪೂಜಗೆರಿ, ಕಾರ್ವಿವಾಡಾ ಮುಂತಾದ ಪ್ರದೇಶಗಲ್ಲಿ ಸಂಚರಿಸಿ ಕೊವೀಡ್-19 ರಕ್ಷಣಾ ಕ್ರಮಗಳ ಬಗ್ಗೆ ಮೀನುಗಾರರಲ್ಲಿ ಅರಿವು ಮೂಡಿಸಿ, ಅವರ ಸಂಕಷ್ಟ ಆಲಿಸಿದರು. ಪಾತಿ ದೋಣಿ ಮೂಲಕ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಾರೆ. ಇದರಲ್ಲಿ ಒಬ್ಬರು ಇಲ್ಲವೇ ಇಬ್ಬರು ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಇದರ ಮೂಲಕವೇ ಅದೆಷ್ಟೋ ಜನ ಬದುಕು ಕಟ್ಟಿಕೊಂಡಿದ್ದಾರೆ.
ಆದರೆ, ಇದೀಗ ಕೊರೊನಾ ತಡೆಗೆ ಈ ಮೀನುಗಾರಿಕೆಗೂ ನಿಷೇಧ ಹೇರಿರುವುದು ಮೀನುಗಾರರು ನಿತ್ಯದ ಊಟಕ್ಕೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾರವಾರ ಬಂದರಿಗೆ ವಿದೇಶದಿಂದ ಬಂದ ಹಡಗನ್ನು ಬಿಡುತ್ತಿರುವಾಗ ಹೊತ್ತಿನ ಊಟಕ್ಕಾಗಿ ಮೀನುಗಾರಿಕೆ ನಡೆಸುವ ಮೀನುಗಾರರಿಗೂ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ತಾಲೂಕಿನ ಕೆಲಕಡೆ ಕುಡಿಯುವ ನೀರಿನ ಹಾಹಾಕಾರ ಶುರುವಾಗಿರುವ ಬಗ್ಗೆ ಸ್ಥಳೀಯರ ಗಮನಕ್ಕೂ ತರಲಾಗಿದೆ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕರು ಒತ್ತಾಯಿಸಿದ್ದಾರೆ.