ಕಾರವಾರ(ಉತ್ತರ ಕನ್ನಡ): ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಿತ್ಯವೂ ದೇವರಿಗೆ ಪೂಜೆ ನಡೆಯುತ್ತದೆ ಹಾಗೂ ಭಕ್ತರಿಗೆ ಪ್ರತಿದಿನ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಆದರೆ, ಕಾರವಾರದ ಈ ದೇವಾಲಯ ವರ್ಷದಲ್ಲಿ ಏಳು ದಿನ ಮಾತ್ರ ಜಾತ್ರೆಗಾಗಿ ತೆರೆಯುತ್ತದೆ. ಮತ್ತು ದೇಗುಲದ ಬಾಗಿಲನ್ನು ದೇವಿಯೇ ತೆರೆಯುತ್ತಾಳೆಂದು ಕೂಡ ಇಲ್ಲಿನ ಜನ ನಂಬುತ್ತಾರೆ! ಅಷ್ಟಕ್ಕೂ ಈ ಬಾರಿ ಈ ದೇಗುಲ ಸೆ. 22ರ ಮಧ್ಯರಾತ್ರಿ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡಿದ್ದು, ಇಂದು ರಾತ್ರಿ ಪುನಃ ಬಾಗಿಲು ಮುಚ್ಚಲಾಯಿತು.
ಹೌದು, ಕಾರವಾರದ ಹಣಕೋಣ ಗ್ರಾಮದ ಸಾತೇರಿದೇವಿ ದೇವಾಲಯವೇ ಈ ವಿಶಿಷ್ಟ ದೇಗುಲ. ವರ್ಷದಲ್ಲಿ 358 ದಿನವೂ ಬಾಗಿಲು ಭದ್ರಪಡಿಸಿದ ಗರ್ಭಗುಡಿಯಲ್ಲಿಯೇ ಇರುವ ಶ್ರೀ ಸಾತೇರಿ ದೇವಿಯ ಗರ್ಭಗುಡಿಯ ಬಾಗಿಲು ದೈವಿ ಚಮತ್ಕಾರ ಎನ್ನುವಂತೆ ವರ್ಷದಲ್ಲಿ ಒಮ್ಮೆ ಮಾತ್ರ ಭಾದ್ರಪದ ಶುದ್ಧ ಚೌತಿ ಮುಗಿದ ಮೂರನೇ ದಿನ (ಸಪ್ತಮಿಯ ರಾತ್ರಿ) ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಆ ಸಮಯದಲ್ಲಿ ಯಾರೂ ದೇವಸ್ಥಾನದತ್ತ ಸುಳಿಯುವುದಿಲ್ಲ.
ವರ್ಷದಲ್ಲಿ ಏಳು ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವ ಈ ದೇವಿಯ ದೇಗುಲದ ಒಳಗೆ ಕ್ಯಾಮರಾ, ಮೊಬೈಲ್ಗಳಿಗೆ ನಿಷಿದ್ಧ ಇರುವುದರಿಂದ ದೇವಿಯನ್ನು ನೋಡಬೇಕೆಂಬುವವರು ವಾರ್ಷಿಕ ಜಾತ್ರೆಯವರೆಗೂ ಕಾಯಲೇಬೇಕು. ಹೀಗಾಗಿ ಕಳೆದ ಒಂದು ವಾರದಿಂದ ಇಲ್ಲಿ ಜನಜಾತ್ರೆಯೇ ನಡೆದಿದ್ದು, ಭಕ್ತರು ದೇವಿಯನ್ನು ಕಣ್ತುಂಬಿಕೊಂಡಿದ್ದಾರೆ. ಹೂ, ಹಣ್ಣು-ಕಾಯಿ ಸೇರಿದಂತೆ ಉಡಿ ತುಂಬುವ ಮೂಲಕ ದೇವಿಗೆ ಹರಕೆಗಳನ್ನು ಸಲ್ಲಿಸಿದ್ದಾರೆ. ಈ ದೇವಿಯಲ್ಲಿ ಹರಕೆ ಹೊತ್ತರೆ ಮನಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ದೇವಿಯ ಭಕ್ತರದ್ದು. ಹೀಗಾಗಿ ಗೋವಾ, ಮಹಾರಾಷ್ಟ್ರಗಳಿಂದಲೂ ಇಲ್ಲಿಗೆ ಭಕ್ತರು ಬಂದು ದರ್ಶನ ಪಡೆಯುತ್ತಿದ್ದಾರೆ.
ಏನಿದರ ಐತಿಹ್ಯ.. ಈ ದೇವಿಗೆ ಸಂಬಂಧಿಸಿದಂತೆ ಕಥೆಯೂ ಇದೆ. ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನು ಬಾಚಿಕೊಳ್ಳುವಾಗ ದುಷ್ಟನ ಕಣ್ಣು ದೇವಿ ಮೇಲೆ ಬಿದ್ದಿತ್ತಂತೆ. ಆಗ ಆಕೆ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ ಊರಿನ ಹಿರಿಯನೊಬ್ಬನಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು, ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿಯೊಂದನ್ನು ಕಟ್ಟಿಕೊಡುವಂತೆ ಹೇಳಿದಳಂತೆ. ಅಲ್ಲದೇ, ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತಾನು ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ. ಅದರಂತೆ ನಂತರದ ದಿನಗಳಲ್ಲಿ ಹಣಕೋಣದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು. ಈ ದೇವತೆ ಹಾಗೂ ದೇವಸ್ಥಾನದ ಇತಿಹಾಸದಂತೆ ಇಲ್ಲಿಯವರೆಗೂ ಏಳು ದಿನ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ದೊರಕಿಸಿಕೊಡಲಾಗುತ್ತದೆ. ಅದರಂತೆ ಗುರುವಾರ ರಾತ್ರಿ ಅರ್ಚಕರು ಬಾಗಿಲನ್ನು ಭದ್ರವಾಗಿ ಮುಚ್ಚುವ ಮೂಲಕ ವಾರ್ಷಿಕ ಜಾತ್ರೆಗೆ ತೆರೆ ಎಳೆದರು.
ಇದನ್ನೂ ಓದಿ: ಆಡಿಕೃತ್ತಿಕೆ ಹರೋಹರ ಜಾತ್ರೆಗೆ ಜನಸಾಗರ; ಕಾವಾಡಿಗಳನ್ನು ಹೊತ್ತು ತಂದು ಹರಕೆ ಸಲ್ಲಿಕೆ