ಕಾರವಾರ : ಚಲಿಸುತ್ತಿದ್ದ ರೈಲನ್ನು ಏರಲು ಮುಂದಾಗಿ ಆಯತಪ್ಪಿ ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೆ ರಕ್ಷಣಾ ದಳದ ಕಾನ್ಸ್‌ಟೇಬಲ್ ರಕ್ಷಣೆ ಮಾಡಿರುವ ಘಟನೆ ಕಾರವಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ರಕ್ಷಣಾ ಇಲಾಖೆಯ ಕಾರ್ಯಾಲಯದ ಸಿಬ್ಬಂದಿ ಬಿ ಎಂ ದೇಸಾಯಿ ಎಂಬುವರು ಡಿ.5ರಂದು ಕಾರವಾರದಿಂದ ಬೆಂಗಳೂರಿಗೆ ತೆರಳಲು ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಎಸ್- 4 ಬೋಗಿಯಲ್ಲಿ ಸೀಟು ಕಾದಿರಿಸಿದ್ದರು.
ಬೋಗಿಯಲ್ಲಿ ತಮ್ಮ ಲಗೇಜುಗಳನ್ನೂ ಇರಿಸಿದ್ದ ಅವರು, ಒಂದಷ್ಟು ವಸ್ತುಗಳನ್ನು ಖರೀದಿಸಲೆಂದು ನಿಲ್ದಾಣದ ಹೊರಕ್ಕೆ ತೆರಳಿದ್ದರು. ಅಷ್ಟರಲ್ಲೇ ಪಂಚಗಂಗಾ ಎಕ್ಸ್‌ಪ್ರೆಸ್ ಕಾರವಾರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಂ.1ರಿಂದ ಹೊರಟು ಬಿಟ್ಟಿದೆ.
ಇದನ್ನು ಗಮನಿಸಿದ 59 ವರ್ಷದ ದೇಸಾಯಿ ಅವರು, ಗಡಿಬಿಡಿಯಲ್ಲಿ ಓಡಿ ಬಂದು ರೈಲನ್ನೇರಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ರೈಲಿನಿಂದ ಕೆಳಕ್ಕೆ ಬಿದ್ದು, ಸ್ವಲ್ಪದರಲ್ಲೇ ರೈಲಿನಡಿ ಸಿಲುಕುವವರಿದ್ದರು. ಅದೇ ಸಂದರ್ಭದಲ್ಲಿ ಪ್ಲಾಟ್ ಫಾರ್ಮ್‌ನಲ್ಲಿದ್ದ ಕರ್ತವ್ಯನಿರತ ರೈಲ್ವೆ ರಕ್ಷಣಾ ದಳದ ಕಾನ್ಸ್‌ಟೇಬಲ್ ನರೇಂದ್ರ ಎಂಬುವರು ಓಡಿ ಬಂದು ಬೀಳುತ್ತಿದ್ದವರನ್ನು ತಮ್ಮತ್ತ ಎಳೆದುಕೊಂಡು ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯದ ದೃಶ್ಯ ನಿಲ್ದಾಣದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರ್‌ಪಿಎಫ್ ಕಾನ್ಸ್‌ಟೇಬಲ್ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ತಮ್ಮ ಪ್ರಾಣ ಉಳಿಸಿದ ಆರ್‌ಪಿಎಫ್ ಗೆ ದೇಸಾಯಿ ಕೃತಜ್ಞತೆ ಹೇಳಿದ್ದು, ತಮ್ಮ ಸ್ನೇಹಿತರು ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ತಾವು ಬಿಟ್ಟಿದ್ದ ಲಗೇಜುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವಂತೆ ಅವರಿಗೆ ಕರೆಮಾಡಿ ತಿಳಿಸಿದ್ದಾರೆ. ಬಳಿಕ ನಂತರದ ರೈಲಿನಲ್ಲಿ ದೇಸಾಯಿಯವರನ್ನು ಎಎಸ್ಐ ನೀಲೇಶ್ ದುಬೆ ಅವರು ಬೆಂಗಳೂರಿಗೆ ಕಳುಹಿಸಿಕೊಟ್ಟರು.