ಕಾರವಾರ(ಉತ್ತರಕನ್ನಡ): ಕರ್ತವ್ಯಕ್ಕೆ ತೆರಳಿದ್ದ ಕಾನ್ಸ್‌ಟೇಬಲ್ ಮನೆಯೊಳಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು, ಕಾನ್ಸ್‌ಟೇಬಲ್ ಪತ್ನಿಗೆ ಚಾಕು ತೋರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಭಟ್ಕಳ ತಾಲೂಕಿನ ಸಾಗರ ರಸ್ತೆಯ ಪೊಲೀಸ್ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ. ಭಟ್ಕಳ ಕಾನ್ಸ್‌ಟೇಬಲ್ ಸಂಗಮೇಶ್ ಕರ್ತವ್ಯಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.
ಗುರುವಾರ ತಡರಾತ್ರಿ ಸುಮಾರು 12.15ರ ಸಮಯಕ್ಕೆ ಬಾಗಿಲು ಬಡಿದ ಶಬ್ದ ಕೇಳಿ ಗಂಡನೇ ಕರ್ತವ್ಯ ನಿರ್ವಹಿಸಿ ಮನೆಗೆ ಬಂದಿರಬಹುದೆಂದು ಭಾವಿಸಿದ ಪತ್ನಿ ನಾಗರತ್ನ ಬಾಗಿಲು ತೆಗೆದ ತಕ್ಷಣ ಚಾಕು ಹಿಡಿದ ಇಬ್ಬರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಮುಸುಕುಧಾರಿಗಳು ಆಕೆಗೆ ಕೂಗದಂತೆ ಬೆದರಿಸಿ ಮನೆಯ ಹಾಲ್ನಲ್ಲಿದ್ದಯೇ ಇದ್ದ ಬೀರುವಿನ ವಸ್ತುವನ್ನೆಲ್ಲಾ ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ನಂತರ ಬೀರುವಿನಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 50 ಸಾವಿರ ಮೌಲ್ಯದ ಬಂಗಾರದ ಕಿವಿಯೋಲೆ, 10 ಸಾವಿರ ಮೌಲ್ಯದ 2 ಗ್ರಾಂ ತೂಕದ ಉಂಗುರ ದೋಚಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಗೋಕರ್ಣದಲ್ಲಿ ವೇಶ್ಯಾವಾಟಿಕೆ ದಂಧೆ: ನಾಲ್ವರು ಯುವತಿಯರ ರಕ್ಷಣೆ, ಓರ್ವನ ಬಂಧನ
ಮುಸುಕುಧಾರಿಗಳು ಮಂಕಿ ಕ್ಯಾಪ್, ಕೈಗೆ ಗ್ಲೌಸ್, ಕಾಲಿಗೆ ಶೂ ಧರಿಸಿದ್ದು, ಅವರಲ್ಲಿ ಓರ್ವ ಕನ್ನಡದಲ್ಲೇ ಮಾತನಾಡುತ್ತಿದ್ದ ಎಂದು ಕಾನ್ಸ್‌ಟೇಬಲ್ ಪತ್ನಿ ನಾಗರತ್ನ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಕಾರವಾರದ ಶ್ವಾನದಳ ಆಗಮಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.