ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವಾರಗಳ ಹಿಂದೆ ಸುರಿದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸಾಕಷ್ಟು ಅನಾಹುತ ಉಂಟಾಗಿದೆ. ಇದರ ಜೊತೆಗೆ ಗುಡ್ಡಗಳು ಕುಸಿದು ಹೆದ್ದಾರಿಗಳು ಸಂಪರ್ಕ ಕಡಿತಗೊಂಡಿವೆ. ಇವುಗಳ ಮರು ಸಂಪರ್ಕ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗಗಳನ್ನು ಸಂಪರ್ಕಿಸುವ ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ ಪ್ರದೇಶದಲ್ಲಿ ಹತ್ತಾರು ಕಡೆಗಳಲ್ಲಿ ಗುಡ್ಡ ಕುಸಿದಿದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ಅಗತ್ಯ ವಸ್ತು ಸೇರಿ ಸರಕು ಸಾಮಗ್ರಿಗಳನ್ನು ಸಾಗಿಸಲು ಸಮಸ್ಯೆಯಾಗಿದೆ.
ಹೆದ್ದಾರಿ 63ರ ಮೂಲಕವೇ ಮಂಗಳೂರಿನಿಂದ ಕಾರವಾರದವರೆಗೆ ಸರಕು ಸಾಗಣೆ ಸೇರಿದಂತೆ ಗ್ಯಾಸ್ ಟ್ಯಾಂಕರ್‌ಗಳು ಸಂಚಾರ ಮಾಡುತ್ತವೆ. ಆದರೆ ಮಳೆಯ ಅರ್ಭಟಕ್ಕೆ ಘಟ್ಟ ಪ್ರದೇಶದ ಹಲವೆಡೆ ರಸ್ತೆಯ ಮೇಲೆ ಧರೆ ಕುಸಿದು ಬಿದ್ದಿದೆ. ಅಂಕೋಲಾದ ಬಾಳೆಗುಳಿಯಿಂದ ಯಲ್ಲಾಪುರ ತಲುಪುವ 80 ಕಿ. ಮೀ ಮಾರ್ಗದಲ್ಲಿ 16 ಕಿ.ಮೀನಷ್ಟು ರಸ್ತೆಗೆ ಹಾನಿಯಾಗಿದೆ. 14 ಕಡೆ ಗುಡ್ಡದ ಮಣ್ಣು ರಸ್ತೆಗೆ ಜಾರಿದ್ದು, 2 ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆದ್ದಾರಿಯೆ ಕುಸಿದುಹೋಗಿದೆ.
ಮಳೆಗಾಲ ಮುಗಿಯುವವರೆಗೂ ಕುಸಿತ ಮುಂದುವರೆಯುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದು ಸುಮಾರು 2 ಕೋಟಿ ಅವಶ್ಯಕತೆಯಿದೆ. ಆದರೆ ಶಾಶ್ವತವಾಗಿ ಪರಿಹಾರಕ್ಕೆ ಸುಮಾರು 70 ಕೋಟಿಗೂ ಅಧಿಕ ಅನುದಾನದ ಅಗತ್ಯವಿದೆ.
ಇನ್ನು ಅರಬೈಲ್ ಘಟ್ಟದಲ್ಲಿ ತೀವ್ರ ಕುಸಿತವಾದ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಹೆದ್ದಾರಿ ಮೇಲೆ ಕುಸಿದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದು, ಬೈಕ್, ಕಾರು, ಟೆಂಪೋ ಸೇರಿದಂತೆ ಸಣ್ಣ ವಾಹನಗಳ ಓಡಾಟಕ್ಕೆ ಮಾತ್ರ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡಲಾಗಿದೆ.
ಜಿಲ್ಲೆಗೆ ಪ್ರವಾಹ ಪರಿಸ್ಥಿತಿಯ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಮಾರ್ಗದಲ್ಲಿ ಆಗಮಿಸಿದ್ದು, ಈ ವೇಳೆ ಹೆದ್ದಾರಿ ಕುಸಿತವಾದ ಪ್ರದೇಶಗಳ ವೀಕ್ಷಣೆ ಮಾಡಿದರು. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದನ್ನ ಕಂಡು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ಹೆದ್ದಾರಿಯ ತುರ್ತು ದುರಸ್ಥಿಗೆ 10 ಕೋಟಿ ಅನುದಾನವನ್ನ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅನುದಾನದ ಬೇಡಿಕೆ ಇಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮೋದಿ ಭೇಟಿ ಮಾಡಿದ ಬೊಮ್ಮಾಯಿ: ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರಾತಿಗೆ ಮನವಿ