ಕಾರವಾರ: ಮೂರು ದಿನಗಳು ಆರ್ಭಟಿಸಿದ್ದ ತೌಕ್ತೆ ಚಂಡಮಾರುತದ ಅಬ್ಬರ ಕಡಿಮೆಯಾದರೂ ಸಹ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಮುಂದುವರೆದಿದೆ.
ಬುಧವಾರ ತಡ ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಕಾರವಾರದ ವಿವಿಧ ರಸ್ತೆಗಳಲ್ಲಿ ನೀರು ತುಂಬಿಕೊಂಡು ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗುಡುಗು ಸಹಿತ ಮಳೆಯಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಅಬ್ಬರದ ನಡುವೆ ಮಳೆ ಹೆಚ್ಚಾಗಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಕಾರವಾರದಲ್ಲಿ ಸೋಂಕು ಹೆಚ್ಚಾದ ಕಾರಣ ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದು, ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಒತ್ತು ನೀಡಲಾಗಿದೆ. ಆದರೆ ಇದೀಗ ಮಳೆಯಿಂದಾಗಿ ಯಾವುದೇ ವಾಹನಗಳು ಆಗಮಿಸದೆ ಇರುವುದು ಚಿಂತೆಗೀಡು ಮಾಡಿದೆ.