ಶಿರಸಿ (ಉತ್ತರ ಕನ್ನಡ): ಹಳೆ ದ್ವೇಷ ಹಿನ್ನೆಲೆ ಟಿಬೆಟಿಯನ್ ವ್ಯಕ್ತಿಗಳಿಬ್ಬರ ನಡುವೆ ಜಗಳ ಇಂದು (ಬುಧವಾರ) ಬೆಳಗ್ಗೆ ನಡೆದಿದೆ. ಒಬ್ಬರಿಗೊಬ್ಬರು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ವ್ಯಕ್ತಿಯು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ್ 4ರಲ್ಲಿ ನಡೆದಿದೆ.
ಮೃತನನ್ನು ಜಮ್ಯಾಂಗ್ ಲಾಕ್ಪಾ (43) ಕ್ಯಾಂಪ್ ನಂಬರ್ 4ರ ಟಿಬೇಟಿಯನ್ ವ್ಯಕ್ತಿ ಎಂದು ಗುರುತಿಸಲಾಗಿದೆ. ಗೊಂಪಾ ಚೋಡೇಕ್ ಗಂಭೀರ ಗಾಯಗೊಂಡ ಮಾಜಿ ಸೈನಿಕನಾಗಿದ್ದು, ಈತನೂ ಸಹ 4 ನಂಬರ್ ಕ್ಯಾಂಪನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಬುಧವಾರ ಬೆಳಗಿನ ಜಾವದಲ್ಲಿ ಜಮ್ಯಾಂಗ್ ಲಾಕ್ಪಾ, ಗೊಂಪಾ ಚೋಡೇಕ್ ಮನೆಗೆ ಬಂದು ಬಾಗಿಲು ಬಡೆದಿದ್ದಾನೆ. ಯಾರೋ ಕಳ್ಳ ಬಂದಿರಬಹುದು ಎಂದು ಗೊಂಪಾ ಚೋಡೇಕ್ ಕೂಗಾಡಲು ಆರಂಭಿಸಿ ಒಳಗೆ ಓಡಿಹೋಗಿದ್ದಾನೆ.
ಅಷ್ಟರಲ್ಲಿ ಜಮ್ಯಾಂಗ್ ಲಾಕ್ಪಾ ಎಂಬುವನು ತನ್ನ ಕೈಯಲ್ಲಿರುವ ಚಾಕುವಿನಿಂದ ಗೊಂಪಾ ಚೋಡೇಕ್ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ, ಇಬ್ಬರು ಪರಸ್ಪರ ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಜಮ್ಯಾಂಗ್ ಲಾಕ್ಪಾ ಚಾಕು ಇರಿತದಿಂದ ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಮಾಜಿ ಸೈನಿಕ ಗೊಂಪಾ ಚೋಡೇಕ್ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಇವರಿಬ್ಬರ ನಡುವೆ ಯಾವ ವಿಷಯಕ್ಕೆ ಜಗಳ ನಡೆದಿದೆ ಎಂದು ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಭೇಟಿ ನೀಡಿ, ಪರಿಶೀಲಿಸಿದರು. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಖುಷಿ ಖುಷಿಯಾಗಿ ಗೋವಾ ಪ್ರವಾಸ ಕೈಗೊಂಡಿದ್ದ ದಂಪತಿ.. ಮನೆಗೆ ಮರಳಿದ ಮರುದಿನವೇ ಪತ್ನಿಯನ್ನೇ ಕೊಂದ ಪತಿ