ಭಟ್ಕಳ : ಪಟ್ಟಣದ ನವಾಯತ್ ಕಾಲೋನಿಯಲ್ಲಿ ಕಸ್ಟಮ್ ಇಲಾಖೆಗೆ ಸೇರಿದ ಜಾಗದಲ್ಲಿ ಕಾಮಗಾರಿಗೆ ಮುಂದಾದಾಗ ಅಧಿಕಾರಿಗಳು ಹಾಗೂ ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ನವಾಯತ್ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ಒಡೆತನದ ಕಸ್ಟಮ್ ಇಲಾಖೆಯ ಸರ್ವೆ ನಂಬರ್ 9999ರಲ್ಲಿ ಕಚೇರಿ ನಿರ್ಮಿಸಲು ಮುಂದಾಗಲಾಗಿತ್ತು. ವಿಷಯ ತಿಳಿದ ಅಲ್ಲಿನ ಸ್ಥಳೀಯ ಯುವಕರು, ಗುಂಪು ಕಟ್ಟಿಕೊಂಡು ಬಂದು ಕಾಮಗಾರಿಗೆ ತಡೆ ಒಡ್ಡಿದ್ದಾರೆ. ಇದು ತಮಗೆ ಸೇರಿದ್ದ ಜಾಗ, ಕಚೇರಿ ನಿರ್ಮಿಸಲು ತಮ್ಮ ವಿರೋಧವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಜಾಗದಲ್ಲಿ ಸ್ಥಳೀಯ ಯುವಕರು ದಿನನಿತ್ಯವು ಕ್ರಿಕೆಟ್ ಆಡುತ್ತಿದ್ದರು. ಇಲ್ಲಿ ಕಚೇರಿಯು ನಿರ್ಮಾಣವಾದಲ್ಲಿ, ಯುವಕರು ಕ್ರಿಕೆಟ್ ಆಡಲು ಮೈದಾನ ಇಲ್ಲದಂತಾಗುತ್ತದೆ. ಆದ್ದರಿಂದ ಈ ಕಾಮಗಾರಿಗೆ ನಾವು ಅವಕಾಶವನ್ನು ನೀಡುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಕಸ್ಟಮ್ ಅಧಿಕಾರಿ ಸ್ಥಳೀಯರಿಗೆ ತಿಳಿಹೇಳುವ ಪ್ರಯತ್ನವನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ವಾತಾವರಣ ಪ್ರಕ್ಷಬ್ಧಗೊಳ್ಳುತ್ತಿರುವ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ದೌಡಾಯಿಸಿ ಸಮಸ್ಯೆ ತಿಳಿಗೊಳಿಸಿದರು. ಸದ್ಯ ಕಾಮಗಾರಿಯನ್ನ ನಿಲ್ಲಿಸಲಾಗಿದೆ. ಆದರೆ, ಕಸ್ಟಮ್ ಸಿಬ್ಬಂದಿಯಾಗಲಿ, ಸ್ಥಳೀಯ ಯುವಕರಾಗಲಿ ಠಾಣೆಗೆ ದೂರು ನೀಡಿಲ್ವಂತೆ.