ಭಟ್ಕಳ: ಜನ ಸಾಮಾನ್ಯರ ಜೊತೆಗೆ ಕೊರೊನಾ ವಾರಿಯರ್ಸ್ ಗಳಲ್ಲೂ ಸೋಂಕು ಕಂಡ ಬಂದಿದ್ದು, ಈ ಹಿನ್ನೆಲೆಯಲ್ಲಿ ನಗರ, ಗ್ರಾಮೀಣ ಹಾಗೂ ಮುರ್ಡೇಶ್ವರ ಪೊಲೀಸ್ ಠಾಣೆಯನ್ನು ಸಾರ್ವಜನಿಕರಿಗೆ ನಿರ್ಬಂಧ ಮಾಡಿ ಠಾಣೆ ಹೊರಗೆ ಪ್ರತ್ಯೇಕ ದೂರು ಕೇಂದ್ರ ಆರಂಭಿಸಲಾಗಿದೆ.
ಸದ್ಯ ಕೊರೊನಾ ಹಾವಳಿ ಜೋರಾಗಿದ್ದು, ಸೋಂಕಿತರ ಜೊತೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ಕೊರೊನಾ ವಾರಿಯರ್ಸ್ ಗಳಿಗೂ ಸೋಂಕು ತಗುಲಿದ ಹಿನ್ನೆಲೆಯಲ್ಲಿ ರಾಜ್ಯದ ಸಾಕಷ್ಟು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಿ, ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಭಟ್ಕಳ ಪಕ್ಕದ ಬೈಂದೂರು ಠಾಣೆಯ ಪೇದೆಯೋರ್ವರಿಗೆ ಕೊರೊನಾ ಸೋಂಕು ಹರಡಿರುವ ಹಿನ್ನೆಲೆ ಭಟ್ಕಳ ನಗರ, ಗ್ರಾಮೀಣ ಹಾಗೂ ಮುಡೇಶ್ವರದ ಠಾಣೆಯಲ್ಲಿ ಮುಂಜಾಗ್ರತೆ ವಹಿಸಲಾಗಿದೆ. ಠಾಣೆಯಿಂದ ದೂರದಲ್ಲಿ ಹೊರಗಡೆ ಪ್ರತ್ಯೇಕವಾಗಿ ಶಾಮಿಯಾನ ಅಳವಡಿಸಲಾಗಿದ್ದು, ಯಾರೇ ಸಾರ್ವಜನಿಕರು ಬಂದಲ್ಲಿ ಅಲ್ಲಿಯೇ ಬಂದು ದೂರು ಅಥವಾ ಸಮಸ್ಯೆಯನ್ನು ತೆರೆಯಲಾದ ದೂರು ಕೇಂದ್ರದಲ್ಲಿ ಹೇಳಿ ಕೊಳ್ಳಬಹುದಾಗಿದ್ದು, ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡಲಾಗಿದೆ.
ಅದರಂತೆ ಮುಂಜಾಗ್ರತಾ ಕ್ರಮವಾಗಿ ಭಟ್ಕಳ ಪೊಲೀಸರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮೇಲಾಧಿಕಾರಿಗಳ ಸೂಚನೆಯಂತೆ ಸಾರ್ವಜನಿಕರು ಠಾಣೆಯೊಳಗೆ ಬಾರದಂತೆ ಬ್ಯಾರಿಗೇಟ್ ಹಾಕಿ ಸಂಚಾರ ನಿರ್ಬಂಧ ಮಾಡಲಾಗಿದೆ.