ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ತೀವ್ರಗೊಂಡಿದೆ. ನಿನ್ನೆ ಹೊನ್ನಾವರದಲ್ಲಿ ಪಕ್ಷಾತೀತವಾಗಿ ವಿವಿಧ ಸಂಘಟನೆಗಳು ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆಸಿವೆ. ಹೋರಾಟದ ಮೊದಲ ಹಂತವಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಆಸ್ಪತ್ರೆ ನಿರ್ಮಾಣವಾಗದಿದ್ದರೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಸಂಘಟನಾ ಒಕ್ಕೂಟ ಮತ್ತು ಸಾರ್ವಜನಿಕರ ಆಶ್ರಯದಲ್ಲಿ ಪಟ್ಟಣದ ಟಪ್ಪರ್ ಹಾಲ್ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಬಳಿಕ ಶರಾವತಿ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿದರು. ಈ ವೇಳೆ ವಿವಿಧ ಕನ್ನಡಪರ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು, ಸಾರ್ವಜನಿಕರು ಭಾಗಿಯಾಗಿದ್ದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಘೋಷಣೆ ಕೂಗಿದರು.
ಜು.20 ರಂದು ಉಡುಪಿಯ ಬೈಂದೂರು ಟೋಲ್‌ನಲ್ಲಿ ನಡೆದ ಆ್ಯಂಬುಲೆನ್ಸ್ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಸಾವನ್ನಪ್ಪಿದ್ದರು. ಜಿಲ್ಲೆಯಲ್ಲಿ ಸೂಕ್ತ ಚಿಕಿತ್ಸಾ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ. ಹಾಗಾಗಿ ಜಿಲ್ಲೆಯಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುವ ಮೂಲಕವಾಗಿ ಶಾಂತ ರೀತಿಯಲ್ಲಿ ಪ್ರತಿಭಟಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ತಾಲೂಕುಗಳಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲೆಗೆ ಆದಷ್ಟು ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ: ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ!