ಕಾರವಾರ: 2003ರ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ವಿದ್ಯುತ್ ವಿತರಣೆ ಮತ್ತು ಪ್ರಸರಣ ನಿಗಮದ ಸಮಿತಿ ನೌಕರರು ಕಾರವಾರದ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರ ವಿದ್ಯುತ್ ಸರಬರಾಜನ್ನು ಖಾಸಗೀಕರಣ ಮಾಡಲು ಹೊರಟಿರುವುದರಿಂದ ನೌಕರರು ಹಾಗೂ ಗ್ರಾಹಕರಿಗೆ ತೀವ್ರ ತೊಂದರೆ ಉಂಟಾಗಲಿದೆ. ಅಲ್ಲದೆ ರೈತರು ಹಾಗೂ ಗ್ರಾಹಕರು ಸರ್ಕಾರದಿಂದ ದೊರೆಯುವ ಹಲವು ಸೌಲಭ್ಯಗಳಿಂದ ವಂಚಿತರಾಗಲಿದ್ದು, ಕೂಡಲೇ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಹಾಗೂ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಗ್ರಾಹಕರಿಗೂ ಸಹಾಯಧನ ಹಂತ ಹಂತವಾಗಿ ಕಡಿಮೆಯಾಗಲಿದ್ದು, ರೈತರು ಬೆಳೆಯುವ ಆಹಾರ ಉತ್ಪಾದನೆಗೂ ಸಮಸ್ಯೆಯಾಗಲಿದೆ. ತಕ್ಷಣ ಖಾಸಗೀಕರಣ ಮಸೂದೆಯನ್ನು ಕೈ ಬಿಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಒಕ್ಕೂಟದ ಕೇಂದ್ರ ಸಮಿತಿ ಸದಸ್ಯ ಗಿರಿಧರ್ ಹರಿಕಂತ್ರ, ಸ್ಥಳೀಯ ಸಮಿತಿ ಅಧ್ಯಕ್ಷ ಎಂ.ರಾಮಪ್ಪ, ಎಂಜಿನಿಯರಿಂಗ್ ಅಸೋಸಿಯೇಷನ್ನ ವಿ.ಎಸ್.ಶೇಬಣ್ಣ, ಕಾರ್ಯನಿರ್ವಾಹಕ ಎಂಜಿನಿಯರ್ ರೋಶ್ನಿ ಪೆಡ್ನೇಕರ್ ಮುಂತಾದವರಿದ್ದರು.