ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ನಡೆಸುತ್ತಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಪ್ರತಿಭಟನಾಕಾರರು ಕಾರವಾರದ ಮುಖ್ಯ ಕಡಲತೀರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತಡೆಯಲು ಮುಂದಾದರು.
ಸಾಗರಮಾಲಾ ಯೋಜನೆಯಡಿ ಎರಡನೇ ಹಂತದ ಬಂದರು ಅಭಿವೃದ್ಧಿ ಪಡಿಸಲು 126 ಕೋಟಿ ರೂಪಾಯಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆಯಾಗುವುದರ ಜತೆಗೆ ಕಡಲತಡಿಯ ನೂರಾರು ಮೀನುಗಾರ ಕುಟುಂಬಗಳು ನೆಲೆ ಕಳೆದುಕೊಳ್ಳುವ ಆತಂಕ ಮೀನುಗಾರರದ್ದಾಗಿದೆ. ಹಾಗಾಗಿ ಮೂರು ದಿನಗಳಿಂದ ಮೀನುಗಾರರು ಕಾಮಗಾರಿ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ, ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾಮಗಾರಿ ನಡೆಯುತ್ತಲೇ ಇದೆ.
ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಮಗಾರಿ ಹಿಂಪಡೆಯುವವರೆಗೂ ಧರಣಿ ನಿಲ್ಲಿಸಲ್ಲ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.