ಕಾರವಾರ: ಸಮುದ್ರದಲ್ಲಿ ಬೋಟ್ವೊಂದು ತಾಂತ್ರಿಕ ತೊಂದರೆಗೊಳಗಾಗಿ ಮೂರು ದಿನಗಳಿಂದ ಪರದಾಡುತ್ತಿದ್ದ ಮೀನುಗಾರರನ್ನು ಭಾರತೀಯ ತಟ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿಯ ಆಂಟೋ ಎಂಬುವರ ಇಮ್ಯಾನ್ಯುವೆಲ್ ಹೆಸರಿನ ಬೋಟ್ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಆದರೆ ಕಾರವಾರದಿಂದ ಸುಮಾರು 46 ನಾಟಿಕಲ್ ಮೈಲಿ ದೂರದಲ್ಲಿ ಎಂಜಿನ್ ಕೈಕೊಟ್ಟ ಕಾರಣ ಬೋಟ್ನಲ್ಲಿದ್ದ 11 ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ ಎಷ್ಟೇ ಪ್ರಯತ್ನ ನಡೆಸಿದರೂ ಬೋಟ್ ಸ್ಥಗಿತಗೊಂಡಿದ್ದು, ಇಂಧನ, ಆಹಾರ ಸಾಮಗ್ರಿ, ಕುಡಿಯುವ ನೀರು ಖಾಲಿಯಾಗಿ ತೊಂದರೆಗೊಳಗಾಗಿದ್ದರು.
ಬಳಿಕ ಕನ್ಯಾಕುಮಾರಿಯ ಚಿನ್ನತುರೈ ಮೀನುಗಾರರ ಒಕ್ಕೂಟದ ಪ್ರತಿನಿಧಿ ರೇಗು ಎಂಬುವರಿಗೆ ದೋಣಿಯಲ್ಲಿದ್ದ ಮೀನುಗಾರರು ಕರೆ ಮಾಡಿ ಮಾಹಿತಿ ನೀಡಿದ್ದರು. ಅದರಂತೆ ಗಸ್ತು ದೋಣಿ ಸಿ–420ಯಲ್ಲಿ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ರಕ್ಷಿಸಿ, ಆಹಾರ ನೀಡಲಾಗಿದೆ. ಜೊತೆಗೆ ತಾಂತ್ರಿಕ ನೆರವು ನೀಡಿ ಮೀನುಗಾರಿಕಾ ದೋಣಿಯ ಎಂಜಿನ್ ಚಾಲನೆ ಮಾಡಲು ಸಹಕರಿಸಿದರು. ಬಳಿಕ ಮೀನುಗಾರಿಕಾ ದೋಣಿಯು ಕೇರಳದ ಕೊಚ್ಚಿಯತ್ತ ಪ್ರಯಾಣ ಬೆಳೆಸಿದ್ದಾರೆ.