ಶಿರಸಿ: ಅಧಿಕಾರ ಸ್ವಾರ್ಥಕ್ಕಾಗಿ ಜನಹಿತ ಕಾಯದೇ ಒಂದಿಲ್ಲೊಂದು ಹೋರಾಟ ಮಾಡುತ್ತಿರುವ ರಾಜಕಾರಣಿಗಳ ನಡೆ ಜನತೆಗೆ ಬೇಸರ ತಂದಿದೆ ಎಂದು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಉತ್ತರ ಕನ್ನಡದ ಶಿರಸಿಯ ನಿಸರ್ಗ ವೇದ ವಿಜ್ಞಾನ ಕೇಂದ್ರಕ್ಕೆ ಆಗಮಿಸಿದ್ದ ಶ್ರೀಗಳು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರಾಜ್ಯದ ಹಲವೆಡೆ ಬರಗಾಲ ಸ್ಥಿತಿಯಿದ್ದು, ರೈತ ಸಮುದಾಯ ಸಂಕಷ್ಟದಲ್ಲಿದೆ. ಸಾಮಾಜಿಕ ವ್ಯವಸ್ಥೆ ಹದಗೆಡುತ್ತಿದೆ. ಇದಕ್ಕೆ ನಮ್ಮನ್ನಾಳುವ ರಾಜಕಾರಣಿಗಳು ಕಾರಣ. ಜನರ ಹಿತ ಕಾಪಾಡದೇ ಕೇವಲ ಸ್ವಾರ್ಥದ ಅಧಿಕಾರಕ್ಕಾಗಿ ಒಂದಿಲ್ಲೊಂದು ಹೋರಾಟ ನಡೆಸುತ್ತಿರುವುದು ಜನತೆಗೆ ಬೇಸರ ತರಿಸಿದೆ ಎಂದರು.
ಜನರ ಹಿತ ಕಾಪಾಡಬೇಕಿದ್ದ ರಾಜಕಾರಣಿಗಳು ಇಂಥ ಕೃತ್ಯದಲ್ಲಿ ತೊಡಗಿರುವುದು ಸರಿಯಲ್ಲ. ವಿನಾಕಾರಣ ಧರ್ಮ, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ, ಸಮಾಜ ಒಡೆಯುತ್ತಿರುವುದು ಸರಿಯಲ್ಲ. ಅಧಿಕಾರ ಯಾರೇ ಹಿಡಿಯಲಿ ಸಾಮಾನ್ಯ ಜನರ ಕಷ್ಟಗಳನ್ನು ಪರಿಹರಿಸಬೇಕಾದ ಜವಾಬ್ದಾರಿಯಿದೆ ಎಂದರು.