ಕಾರವಾರ: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಅನೇಕರಿಗೆ ವಂಚಿಸಲು ಮುಂದಾಗಿದ್ದ ಖತರ್ನಾಕ್ ಅಸಾಮಿಯೊಬ್ಬನನ್ನು ಜಿಲ್ಲೆಯ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನಿರುದ್ಯೋಗವನ್ನು ಬಂಡವಾಳ ಮಾಡಿಕೊಂಡ ಹಾವೇರಿ ಜಿಲ್ಲೆಯ ಬ್ಯಾಡಗಿಯ ಸಂತೋಷ ತಿಪ್ಪಣ್ಣ ಗುದಗಿ ಎಂಬಾತ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಧಾರವಾಡ, ಬೆಳಗಾವಿ ಉತ್ತರಕನ್ನಡ ಮತ್ತು ಹಾವೇರಿ ಸೇರಿದಂತೆ ಬರೋಬ್ಬರಿ 12 ಅಭ್ಯರ್ಥಿಗಳಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಒಬ್ಬ ಅಭ್ಯರ್ಥಿಯಿಂದ 2 ಲಕ್ಷ ರೂ. ಹಣ ಮುಂಗಡವಾಗಿ ಪಡೆದುಕೊಂಡಿದ್ದಾನೆ ಎನ್ನಲಾಗ್ತಿದೆ.
ಸಂತೋಷ ವಿವಿಧ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಸಹಿ ಇರುವ ಸುಳ್ಳು ನೇಮಕಾತಿ ಆದೇಶ ಪತ್ರವನ್ನು ಕೊಟ್ಟು ವಂಚಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ಆರೋಪಿಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ಆರೋಪಿ ಹಿನ್ನೆಲೆ:
ಆರೋಪಿ ಸಂತೋಷ್ ಗುದಗಿ 2007 ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಗೊಂಡು ಬೆಂಗಳೂರು ನಗರದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ. ಸರ್ಕಾರಿ ನೌಕರಿ ಸಿಕ್ಕರೂ ಕೂಡ ಹಣ ಮಾಡಲು ಅಡ್ಡದಾರಿ ಹಿಡಿದಿದ್ದ. ಅಂಚೆ ಇಲಾಖೆಯಲ್ಲಿ ವಿಶೇಷ ಖೋಟಾದಡಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚಿಸಿ ಈ ಹಿಂದೆ ಸಸ್ಪೆಂಡ್ ಕೂಡ ಆಗಿದ್ದ ಎಂದು ತಿಳಿದುಬಂದಿದೆ.
ವಂಚನೆ ಆರೋಪದ ಕುರಿತು ಮುಂಡಗೋಡ ಪಟ್ಟಣದ ಗುರುರಾಜ್ ರಾಯ್ಕರ್ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.