ಶಿರಸಿ: ನಗರದ ವಿವಿಧ ಏರಿಯಾಗಳಲ್ಲಿ ಫ್ರೀ ಫೈರ್ ಎಂಬ ಆನ್ಲೈನ್ ಆಟದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗದೆ ಇರುವುದರಿಂದ ಪಾಲಕರು ತಮ್ಮ ಮಕ್ಕಳಿಗೆ ಆನ್ಲೈನ್ ತರಗತಿಗಳಿಗೋಸ್ಕರ ಸ್ಮಾರ್ಟ್ ಮೊಬೈಲ್ ಫೋನ್ಗಳನ್ನು ಖರೀದಿಸಿ ಕೊಡುತ್ತಿದ್ದು, ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳ ನೆಪದಲ್ಲಿ ಫ್ರೀ ಫೈರ್ ಎಂಬ ಆನ್ಲೈನ್ ಆಟದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆಟ ಆಡಲು ಮನೆಯಲ್ಲಿ ಇಟ್ಟಿರುವ ಹಣ ಕದಿಯುತ್ತಿರುವ ಬಗ್ಗೆ ಹಲವಾರು ಪ್ರಕರಣಗಳು ಶಿರಸಿ ಪೊಲೀಸರ ಗಮನಕ್ಕೆ ಬಂದಿದ್ದು, ಡಿವೈಎಸ್ಪಿ ರವಿ ಡಿ. ನಾಯ್ಕ ನೇತೃತ್ವದ ತಂಡ ಫ್ರೀ ಫೈರ್ ಆನ್ಲೈನ್ ಆಟದಲ್ಲಿ ತೊಡಗಿದ್ದ ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಪಾಲಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದೆ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್
ಪಾಲಕರು ತಮ್ಮ ಮಕ್ಕಳು ಫ್ರೀ ಫೈರ್ನಂತಹ ಆನ್ಲೈನ್ ಆಟಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಸೂಕ್ತ ನಿಗಾ ವಹಿಸುವಂತೆ ಡಿವೈಎಸ್ಪಿ ರವಿ ಡಿ. ನಾಯ್ಕ ಸೂಚಿಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.