ಕಾರವಾರ : ಕಾಳಿ ನದಿ ನೀರನ್ನು ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳಿಗೆ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಜೊಯಿಡಾ ತಾಲೂಕನ್ನು ಬಂದ್ ಮಾಡಿ ವಿವಿಧ ಸಂಘಟನೆಗಳು ಸೇರಿದಂತೆ ಸಾರ್ವಜನಿಕರಿಂದ ಪ್ರತಿಭಟನೆ ನಡೆಸಲಾಗಿದೆ.
ಕಾಳಿ ಬ್ರಿಗೇಡ್ ಸಂಘಟನೆ ಕರೆ ನೀಡಿದ್ದ ಜೊಯಿಡಾ ಬಂದ್ಗೆ ತಾಲೂಕಿನಾದ್ಯಂತ ಸ್ಪಂದನೆ ದೊರೆತಿದೆ. ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತbeಗಿ ಬಂದ್ ಮಾಡಲಾಗಿದೆ. ವಾಹನಗಳ ಸಂಚಾರ ಎಂದಿನಂತಿದ್ದರೂ ಅಂಗಡಿ-ಮುಂಗಟ್ಟುಗಳು ತೆರೆಯದ ಕಾರಣ ಜನ ಸಂಚಾರ ಕೂಡ ವಿರಳವಾಗಿದೆ.
ಜೊಯಿಡಾದ ಡಿಗ್ಗಿಯಲ್ಲಿ ಹುಟ್ಟುವ ಕಾಳಿ ನದಿಯು ಪಶ್ಚಿಮಾಭಿಮುಖವಾಗಿ ಕಾರವಾರಕ್ಕೆ ಹರಿದು, ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಸುಮಾರು 184 ಕಿ.ಮೀ. ದೂರದವರೆಗೆ ಹರಿಯುವ ಕಾಳಿ, ತನ್ನ ಹರಿವಿನ ಮಾರ್ಗದುದ್ದಕ್ಕೂ ಲಕ್ಷಾಂತರ ನಿವಾಸಿಗಳಿಗೆ ಜೀವನದಿಯಾಗಿದೆ.
ಕುಡಿಯಲು, ದಿನಬಳಕೆಗೆ, ವ್ಯವಹಾರ-ಕಸುಬಿಗೆ ಕಾಳಿ ಬಳಕೆಯಾಗುತ್ತಾಳೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹರಿದು ಬರುವ ಕಾಳಿ ಸಕಲ ಜೀವಜಂತುಗಳಿಗೂ ಆಶ್ರಯದಾಯಿ.
ಉತ್ತರ ಕನ್ನಡಿಗರ ಕೆಂಗಣ್ಣಿಗೆ ಗುರಿ
ಕಾಳಿಯ ಹರಿವಿನುದ್ದಕ್ಕೂ ಅನೇಕ ಅಣೆಕಟ್ಟುಗಳನ್ನು ಕಟ್ಟಿ ಜಲವಿದ್ಯುತ್ ಉತ್ಪಾದನೆ ಕಾರ್ಯ ಕೂಡ ನಡೆಯುತ್ತಿದೆ. ಆದರೆ, ಕಾಳಿಯಿಂದ ಕುಡಿಯುವ ನೀರನ್ನು ಪಡೆಯಲು ಉತ್ತರ ಕನ್ನಡಕ್ಕೆ ಈವರೆಗೆ ಯಾವುದೇ ವಿಶೇಷ ಯೋಜನೆಯನ್ನು ಸರ್ಕಾರ ಘೋಷಿಸಿಲ್ಲ. ಈ ನಡುವೆ ಇತ್ತೀಚಿನ ರಾಜ್ಯ ಬಜೆಟ್ನಲ್ಲಿ ಏಕಾಏಕಿ ಉತ್ತರ ಕರ್ನಾಟಕಕ್ಕೆ ಕಾಳಿ ನೀರನ್ನು ಕೊಂಡೊಯ್ಯುವ ಯೋಜನೆ ಘೋಷಿಸಿದ್ದು, ಉತ್ತರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನು ವಿರೋಧಿಸಿ ಜೊಯಿಡಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಂದ್ ನಡುವೆ ಕಾಳಿ ಬ್ರಿಗೇಡ್ ಪ್ರತಿಭಟನೆ ಕೂಡ ನಡೆಸಿತು. ಈ ವೇಳೆ ಮಾತನಾಡಿದ ಕಾಳಿ ಬ್ರಿಗೇಡ್‌ನ ರವಿ ರೇಡ್ಕರ್, ಕಾಳಿ ನಮ್ಮ ತಾಯಿಯಂತೆ. ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ನದಿ ನೀರು ಒಯ್ಯುವುದು ಬೇಡ ಎಂದರು.
ಓದಿ: ಹನೂರಲ್ಲಿ ಹಳ್ಳಕ್ಕೆ ಬಿದ್ದ ಕೆಎಸ್ಆರ್ಟಿಸಿ ಬಸ್ : ವೃದ್ಧೆ ಸೇರಿ ಇಬ್ಬರು ಸಾವು, ಐವರು ಪ್ರಯಾಣಿಕರ ಸ್ಥಿತಿ ಗಂಭೀರ