ಕಾರವಾರ: ರಾಜ್ಯದಲ್ಲಿ ಕೊರೊನಾ ಅಬ್ಬರ ಮುಂದುವರಿದಿದ್ದು, ಕೋವಿಡ್ ಚೈನ್ ಬ್ರೇಕ್ ಮಾಡೋದಕ್ಕೆ ಎಲ್ಲೆಡೆ ಲಾಕ್ಡೌನ್ ಜಾರಿ ಮಾಡಲಾಗುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಲಾಕ್ಡೌನ್ ನಿಯಮಗಳು ದಿನೇ ದಿನೇ ಬದಲಾಗುತ್ತಿರುವುದು ಜನರಲ್ಲಿ ಗೊಂದಲವನ್ನುಂಟು ಮಾಡಿದ. ಹೀಗಾಗಿ ಜನ ಆಕ್ರೋಶ ಹೊರಹಾಕಿದ್ದಾರೆ.
ಹೌದು, ಕೋವಿಡ್ ಮಹಾಮಾರಿ ತನ್ನ ರಣಕೇಕೆ ಮುಂದುವರಿಸಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಮತ್ತು ಆಯಾ ಜಿಲ್ಲಾಡಳಿತಗಳು ಹರಸಾಹಸ ಪಡುತ್ತಿವೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹೊರಡಿಸುವ ಧಿಡೀರ್ ಆದೇಶಕ್ಕೆ ಜನ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೆ ಮಂಗಳವಾರ ಮತ್ತು ಶುಕ್ರವಾರ ಲಾಕ್ಡೌನ್ ಸಡಿಲಿಕೆ ನೀಡಲಾಗಿತ್ತು. ಹೀಗಾಗಿ ಜಿಲ್ಲೆಯ ಜನರು ಮಂಗಳವಾರದಂದು ಮಾರುಕಟ್ಟೆಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದ್ದರು.
ಇನ್ನೂ ಕೆಲವರು ಶುಕ್ರವಾರ ಕೂಡ ಸಡಿಲಿಕೆ ಇದೆ ಎಂದು ಮಾರುಕಟ್ಟೆ ಕಡೆ ಆಗಮಿಸಿದ್ದರು. ಆದ್ರೆ ನಗರ, ಪಟ್ಟಣಕ್ಕೆ ಬಂದ ಜನರಿಗೆ ಪುಲ್ ಶಾಕ್ ಕಾದಿತ್ತು. ಎಲ್ಲೆಡೆಯೂ ಬಂದ್ ಆಗಿ ನಿನ್ನೆ ಸಂಜೆಯೇ ಜಿಲ್ಲಾಡಳಿತ ಇನ್ನೊಂದು ಆದೇಶ ಮಾಡಿ ಶುಕ್ರವಾರದಿಂದ ಭಾನುವಾರದವರೆಗೆ ಸಂಪೂರ್ಣ ಲಾಕ್ಡೌನ್ ಮಾಡಿ ಆದೇಶಿಸಿತ್ತು. ಇದು ತಿಳಿಯದ ಅದೆಷ್ಟೋ ಜನರು, ಮಾತ್ರವಲ್ಲದೆ ಸ್ವತಃ ಅಂಗಡಿಕಾರರು ಕಂಗಾಲಾಗಿದ್ದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬಸ್ ವ್ಯವಸ್ಥೆ ಇಲ್ಲ. ತರಕಾರಿ ಸೇರಿದಂತೆ ಯಾವುದು ಕೂಡ ಎಲ್ಲಾ ಕಡೆ ಮನೆ ಬಾಗಿಲಿಗೆ ಹೋಗುವುದಿಲ್ಲ. ಹೀಗಿರುವಾಗ ಜಿಲ್ಲಾಡಳಿತ ದಿನಕ್ಕೊಂದು ನಿಯಮ ಹೊರಡಿಸಿದಲ್ಲಿ ಜನರು ಸಾಕಷ್ಟು ಸಮಸ್ಯೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ವ್ಯಾಪಾರಸ್ಥರಿಗೂ ಯಾವಾಗ ಅಂಗಡಿ ತೆರೆಯುವುದು, ಯಾವಾಗ ಬಂದ್ ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯ ವ್ಯಾಪಾರಿಗಳು.
ಇನ್ನು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಮೀತಿಮೀರಿದ್ದು, ಕಳೆದ ಒಂದೆರಡು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ನಿಯಂತ್ರಣಕ್ಕೆ ಬರತೊಡಗಿದೆ. ಆದರೆ ಮಂಗಳವಾರ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಎಲ್ಲೆಡೆ ಜನ ಜಾತ್ರೆಯೇ ಸೇರಿತ್ತು. ಹೀಗೆ ಅದೇ ನಿಯಮ ಜಾರಿ ಮಾಡಿದಲ್ಲಿ ಮತ್ತಷ್ಟು ಜನರು ಸೇರುವ ಆತಂಕದ ಹಿನ್ನೆಲೆಯಲ್ಲಿ ಇದೀಗ ಶುಕ್ರವಾರದಿಂದ ಭಾನುವಾರ ಸಂಪೂರ್ಣ ಲಾಕ್ ಮಾಡಲಾಗಿದೆ. ಸೋಮವಾರದಿಂದ ಗುರುವಾರದವರೆಗೆ ಬೆಳಗ್ಗೆ 8ರಿಂದ 12 ಗಂಟೆವರೆಗೆ ಓಪನ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅವಶ್ಯಕ ವಸ್ತುಗಳ ಖರೀದಿಗೆ, ಕೃಷಿ ಉಪಕರಣಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಜನರ ಜೀವ ಸುರಕ್ಷತಾ ದೃಷ್ಟಿಯಿಂದಲೇ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೀಗಾಗಿ ಜನತೆ ಸಹರಿಸಬೇಕು ಎನ್ನುತ್ತಾರೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್.
ಒಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹೊರಡಿಸುವ ಆದೇಶವನ್ನು ಜಿಲ್ಲೆಯ ಬಹುತೇಕ ಜನರು ಪಾಲನೆ ಮಾಡುತ್ತಿದ್ದಾರೆ. ಆದರೆ ಹಳ್ಳಿಗಳನ್ನೆ ಹೆಚ್ಚಾಗಿ ಹೊಂದಿರುವ ಸರ್ಕಾರದ ನಿಯಮಗಳು ಸರಿಯಾಗಿ ತಿಳಿಯದ ಹಳ್ಳಿಗರಿಗೆ ಈ ರೀತಿಯ ಧಿಡೀರ್ ಬದಲಾಗುವ ಆದೇಶದಿಂದ ಗೊಂದಲ ಉಂಟಾಗಿದ್ದು, ಜಿಲ್ಲಾಡಳಿತ 24 ಗಂಟೆ ಮುಂಚಿತವಾಗಿಯಾದರೂ ತಿಳಿಸದರೆ ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇದನ್ನೂ ಓದಿ: Oxygen express: 6 ಕಂಟೈನರ್ಗಳಲ್ಲಿ ರಾಜ್ಯಕ್ಕೆ ಬಂತು 121 ಟನ್ ಆಮ್ಲಜನಕ