ಕಾರವಾರ (ಉತ್ತರ ಕನ್ನಡ): ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿ-ಗಂಗಾವಳಿ ನಡುವೆ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಸದ್ಯ ಜನರು ಮತ್ತು ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ದಶಕಗಳ ಹೋರಾಟದ ಬಳಿಕ ಸೇತುವೆ ಮಂಜೂರಾದರೂ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿತ್ತು. ಕೊರೊನಾ ಮಹಾಮಾರಿಯಿಂದಾಗಿ ಆಮೆ ವೇಗದಲ್ಲಿ ಸಾಗುತ್ತಿದ್ದ ಸೇತುವೆ ಕಾಮಗಾರಿಯ ಈಗ ಬಹುತೇಕ ಪೂರ್ಣಗೊಂಡಿದೆ.
ಸೇತುವೆಯ ಎರಡೂ ಕಡೆಗಳಿಗೆ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ. ಈ ಹಿಂದೆ ಜನರು ನದಿ ದಾಟಲು ಬಾರ್ಜ್ ಅವಲಂಬಿಸಬೇಕಾಗಿತ್ತು. ಮಳೆಗಾಲದಲ್ಲಿ ನದಿ ದಾಟಲು ಗ್ರಾಮಸ್ಥರು ಹರಸಾಹಸ ಪಡಬೇಕಾಗಿತ್ತು. ಹೀಗಾಗಿ ಗಂಗಾವಳಿ, ಗೋಕರ್ಣ ಭಾಗದ ಜನರು ಹತ್ತಿರದ ಅಂಕೋಲಾ ಪಟ್ಟಣ ತಲುಪಲು 20 ಕಿ.ಮೀ ಸುತ್ತಿ ಬಳಸಿ ಹೋಗಬೇಕಿತ್ತು. ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವುದರಿಂದ ಜನರು ಹಾಗೂ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು, ಶಾಲಾ - ಕಾಲೇಜು ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ.
ಗ್ರಾಮಸ್ಥರಾದ ತುಕಾರಾಮ ಮಾತನಾಡಿ, ಗಂಗಾವಳಿ ಸೇತುವೆಯಿಂದ ಜನರಿಗೆ ಅನುಕೂಲವಾಗಿದೆ. ಈಗ ಬೈಕ್ ಓಡಾಡಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸೇತುವೆ ಕಾಮಗಾರಿ 7 ವರ್ಷಗಳಿಂದ ನಡೆಯುತ್ತಿದೆ. ಅದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಸದ್ಯ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವುದರಿಂದ ಶಾಲಾ ಮಕ್ಕಳಿಗೆ ಮತ್ತು ಬೇರೆ ಕಡೆ ಕೆಲಸಕ್ಕೆ ತೆರಳುವವರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಗ್ರಾಮಸ್ಥರಾದ ಸಂಜೀವ ನಾಯ್ಕ ಮಾತನಾಡಿ, ಗಂಗಾವಳಿ ಸೇತುವೆಯಲ್ಲಿ ಜನರು ಮತ್ತು ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಶಾಲಾ ಮಕ್ಕಳಿಗೆ ಮತ್ತು ಆಸ್ಪತ್ರೆಗೆ ತೆರಳುವವರಿಗೆ, ಪಟ್ಟಣಕ್ಕೆ ಹೋಗಿ ಬರಲು ಅನುಕೂಲವಾಗಿದೆ. ಮಳೆಗಾಲದಲ್ಲಿ ಸುತ್ತಿಬಳಸಿಕೊಂಡು ಹೋಗಬೇಕಾಗಿತ್ತು. ಸೇತುವೆ ನಿರ್ಮಾಣ ಆಗಿರುವುದರಿಂದ ಹುಬ್ಬಳ್ಳಿ, ಅಂಕೋಲಾ, ಯಲ್ಲಾಪುರದಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ಸಂಸತಸ ವ್ಯಕ್ತಪಡಿಸಿದರು.
ಗಂಗಾವಳಿ, ಗೋಕರ್ಣ ಭಾಗದಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಅಂಕೋಲಾಕ್ಕೆ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಈ ಹಿಂದೆ ಬಾರ್ಜ್ ಓಡಾಟ ಇದ್ದ ಸಂದರ್ಭದಲ್ಲಿ ನದಿ ದಾಟಲು ಬಾರ್ಜ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ ಇದೀಗ ಸೇತುವೆ ನಿರ್ಮಾಣವಾಗಿರುವುದರಿಂದ ಕೆಲಸದ ಸಮಯಕ್ಕೆ ಸರಿಯಾಗಿ ತೆರಳಲು ಅನುಕೂಲವಾಗಿದೆ. ಸೇತುವೆ ಮೂಲಕ ಅಂಕೋಲಾಕ್ಕೆ ಕೇವಲ 10 ಕಿಮೀ ದೂರವಿರುವುದರಿಂದ ಈ ಭಾಗದ ಜನರಿಗೆ ಓಡಾಟಕ್ಕೆ ಸಾಕಷ್ಟು ಅನುಕೂಲವಾದಂತಾಗಿದೆ. ಇನ್ನು ಸೇತುವೆಯ ಕಾಮಗಾರಿಯನ್ನು ಅದಷ್ಟು ಬೇಗ ಪೂರ್ಣಗೊಳಿಸಿದಲ್ಲಿ ಎಲ್ಲಾ ಮಾದರಿಯ ವಾಹನಗಳ ಓಡಾಟಕ್ಕೆ ಅನುಕೂಲವಾಗುತ್ತದೆ.
ಇದನ್ನೂ ಓದಿ: ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಲವು ಕನ್ನಡ ಶಾಲೆಗೆ ಮುಚ್ಚುವ ಭೀತಿ : ಆಗಬೇಕಿದೆ ಸರ್ಕಾರಿ ಶಾಲೆ ಉಳಿಸುವ ಪ್ರಯತ್ನ !