ಕಾರವಾರ: ಅನಾರೋಗ್ಯಕ್ಕೆ ಒಳಗಾಗಿದ್ದ ವೃದ್ಧರೊಬ್ಬರನ್ನು ಊರಿಗೆ ರಸ್ತೆ ಇಲ್ಲದೇ ಊರಿನ ಜನರೇ ಸೇರಿ ಜೋಳಿಗೆ ಮೂಲಕ ಆಸ್ಪತ್ರೆಗೆ ಹೊತ್ತುತಂದು ಚಿಕಿತ್ಸೆ ಕೊಡಿಸಿದ ಘಟನೆ ಅಂಕೋಲಾ ತಾಲ್ಲೂಕಿನ ಅವರ್ಸಾದ ವರಿಲ್ ಬೇಣದಲ್ಲಿ ನಡೆದಿದೆ. ವರಿಲ್ ಬೇಣದ ನೂರಾ ಪೊಕ್ಕಾಗೌಡ ಎಂಬುವವರು ಅನಾರೋಗ್ಯಕ್ಕೆ ಒಳಗಾಗಿ ಓಡಾಡಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ಆದರೆ ಊರಿಗೆ ಯಾವುದೇ ರಸ್ತೆ ಇರದ ಕಾರಣ ಊರ ಮಂದಿ ಸೇರಿ ಕುರ್ಚಿಯೊಂದನ್ನು ಜೋಳಿಗೆಯಾಗಿ ಮಾಡಿಕೊಂಡು ಸುಮಾರು 5 ಕಿ.ಮೀ ಕಾಲ್ನಡಿಗೆಯಲ್ಲಿ ಬಂದು ಬಳಿಕ ವಾಹನದ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಇದೀಗ ವೃದ್ಧ ನೂರಾ ಪೊಕ್ಕಾ ಆರೋಗ್ಯವಾಗಿದ್ದಾರೆ. ಅವರ್ಸಾದಿಂದ 5 ಕಿ.ಮೀ ದೂರದಲ್ಲಿರುವ ವರಿಲ್ ಬೇಣಕ್ಕೆ 3 ಕಿ.ಮೀ ರಸ್ತೆ ಇಲ್ಲ. ಇಲ್ಲಿನ ಜನರು ಕಾಡಿನ ಮಧ್ಯೆಯೇ ಕಾಲು ಹಾದಿಯಲ್ಲಿ ನಡೆದುಕೊಂಡು ತೆರಳಬೇಕು. ಸುಮಾರು 8 ಮನೆಗಳಿದ್ದು, ಕೆಲವರು ರಸ್ತೆ ಇಲ್ಲದ ಕಾರಣ ಊರನ್ನು ಬಿಟ್ಟು ಅವರ್ಸಾದಲ್ಲಿ ಬಂದು ನೆಲೆಸಿದ್ದಾರೆ.
ನಾವು ಅನಾದಿಕಾಲದಿಂದಲೂ ಇಲ್ಲಿ ವಾಸ ಮಾಡುತ್ತಿದ್ದು, ಜಮೀನು ಕೂಡ ಹೊಂದಿದ್ದೇವೆ. ಆದರೆ ಇದು ಅರಣ್ಯ ಇಲಾಖೆ ಜಾಗ ಆಗಿರುವುದರಿಂದ ರಸ್ತೆ ಸಂಪರ್ಕ ಸಾಧ್ಯವಾಗಿಲ್ಲ. ಕೂಡಲೇ ಅಧಿಕಾರಿಗಳು ಜನಪ್ರತಿನಿಧಿಗಳು ಊರಿಗೆ ಅಗತ್ಯ ಇರುವ ಕೇವಲ 3 ಕಿ. ಮೀ ರಸ್ತೆ ಅವಕಾಶ ಕಲ್ಪಿಸಿ ಇಲ್ಲಿನ ಜನರ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ಗುರುಗೌಡ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಾಗಿಸಲು ಹಣ ಇಲ್ಲ... ಆಸ್ಪತ್ರೆಯಿಂದ 10 ಕಿಮೀವರೆಗೆ ಮಂಚದಲ್ಲೇ ಮೃತದೇಹ ಹೊತ್ತೊಯ್ದ ಕುಟುಂಬಸ್ಥರು!