ಕಾರವಾರ : ದೈವಾಧೀನರಾಗಿರುವ ವಿಶ್ವೇಶ ತೀರ್ಥ ಶ್ರೀಗಳು, ಕೈಗಾ ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟ, ಪಶ್ಚಿಮ ಘಟ್ಟ ಉಳಿಸಿ ಅಭಿಯಾನ ಸೇರಿದಂತೆ ಹಲವು ಅಭಿಯಾನಗಳಲ್ಲಿ ಜಿಲ್ಲೆಯ ಜನರಿಗೆ ಮಾರ್ಗದರ್ಶಕರಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು.
ಶ್ರೀಗಳ ಅಗಲಿಕೆಗೆ ಉತ್ತರಕನ್ನಡ ಜಿಲ್ಲೆ ಸೇರಿದಂತೆ ದೇಶದ ಕೊಟ್ಯಂತರ ಭಕ್ತರು ದುಃಖಿತರಾಗಿದ್ದಾರೆ. ಈ ನಡುವೆ ಶ್ರೀಗಳ ಹೋರಾಟದ ಹಾದಿ, ಲೋಕ ಕಲ್ಯಾಣ ಕಾರ್ಯಗಳು ಮುನ್ನೆಲೆಗೆ ಬಂದಿದ್ದು, ಕಾರವಾರದ ಕೈಗಾದಲ್ಲಿ ನಿರ್ಮಾಣ ಮಾಡಲು ಮುಂದಾದ ಅಣು ವಿದ್ಯುತ್ ಸ್ಥಾವರದಿಂದ ಸ್ಥಳೀಯರ ಆರೋಗ್ಯ ಹಾಗೂ ಪರಿಸರದ ಮೇಲೆ ಹಾನಿಯಾಗುವ ಹಿನ್ನೆಲೆಯಲ್ಲಿ ನಿರಂತರ ಹೋರಾಟ ನಡೆಸಿದರು.
1988 ರಲ್ಲಿ ಕೈಗಾ ಅಣು ವಿದ್ಯುತ್ ಘಟಕ ಸ್ಥಾಪನೆಗೆ ಮುಂದಾದಾಗ ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಜನರು ನಡೆಸುತ್ತಿದ್ದ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು. ಮಾತ್ರವಲ್ಲದೆ ಕಾರವಾರ ತಾಲೂಕಿನ ಭಾರೆ ಗ್ರಾಮದಿಂದ ಪಾದಯಾತ್ರೆ ಮೂಲಕ ಕೈಗಾಗೆ ತೆರಳಲು ಮುಂದಾಗಿದ್ದರು. ಆದರೆ ಅಂದು ಪೊಲೀಸರು ಈ ಹೋರಾಟವನ್ನು ಹತ್ತಿಕ್ಕಿದ್ದರು. ಆದರೂ ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿತ್ತು.
ಇದೀಗ ಕೈಗಾದಲ್ಲಿ ಮತ್ತೆ ಹೆಚ್ಚುವರಿಯಾಗಿ 5 ಮತ್ತು 6ನೇ ಘಟಕ ಸ್ಥಾಪನೆಗೆ ಪ್ರಸ್ತಾಪ ಸಲ್ಲಿಸಲಾಗಿದೆ, ಇದರ ವಿರುದ್ಧವೂ ಜನ ಹೋರಾಟಕ್ಕೆ ಮುಂದಾದಾಗ ಕಳೆದ ನವೆಂಬರ್ 12 ರಂದು ಕಾರವಾರದ ಮಲ್ಲಾಪುರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಆಗಮಿಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಕೈಗಾದ ಬಗ್ಗೆ ಎರಡು ಮೂರು ಭಾರಿ ಪಾದಯಾತ್ರೆ ಮಾಡಿದ್ದೇವೆ, ಏಕಾದಶಿ ಉಪವಾಸ ಮಾಡಿದ್ದೇವು. ಹಣಕೋಣ ಉಷ್ಣ ಸ್ಥಾವರವನ್ನು ವಿರೋಧಿಸಿದ್ದೇವು. ಉಡುಪಿ, ಉತ್ತರಕನ್ನಡ ಎಲ್ಲವೂ ನಮ್ಮ ಜಿಲ್ಲೆಗಳೇ ಪರಿಸರ ಉಳಿದರೇ ಮಾತ್ರ ಉಳಿಯಲು ಸಾಧ್ಯವಿದೆ. ಈ ಕಾರಣದಿಂದ ಅಣು ವಿದ್ಯುತ್ ಸ್ಥಾವರ ಎಂದು ಹೇಳಿದ್ದರು.