ಭಟ್ಕಳ: ಮುರುಡೇಶ್ವರ ದೇವಸ್ಥಾನದ ರಸ್ತೆಯಲ್ಲಿ ಬಿದ್ದ ಗುಂಡಿಗಳಿಂದ ವಾಹನ ಸವಾರರಿಗೆ ಆಗುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಾಟ್ಸಪ್ ಮೂಲಕ ದೂರು ಸಲ್ಲಿಸಿದ ಹಿನ್ನೆಲೆ ಸೋಮವಾರ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಯಿತು.
ದೂರು ಸಲ್ಲಿಸಿದ ಹಿನ್ನೆಲೆ ರಸ್ತೆ ಗುಂಡಿ ಮುಚ್ಚಲು ಕಾಟಾಚಾರಕ್ಕೆ ಡಾಂಬರ್ ಪುಡಿ ತುಂಬಿ ಕಾಮಗಾರಿಗೆ ಮುಂದಾದವರನ್ನು ಸಾರ್ವಜನಿಕರು ತಡೆದು ಸಮರ್ಪಕ ರಸ್ತೆ ಮಾಡುವಂತೆ ಕಾಮಗಾರಿ ಗುತ್ತಿಗೆದಾರರಿಗೆ ಆಗ್ರಹಿಸಿ ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಇನ್ನೇನು ಕೆಲವೇ ದಿನದಲ್ಲಿ ವಿಶ್ವ ಪ್ರಸಿದ್ಧ ಮುರುಡೇಶ್ವರ ಜಾತ್ರೆ ಆರಂಭವಾಗಲಿದ್ದು, ಇತ್ತ ಕಡೆ ಸಮರ್ಪಕ ರಸ್ತೆ ಇಲ್ಲದೇ ಪ್ರವಾಸಿಗರು, ಸಾರ್ವಜನಿಕರು ಪರಿತಪಿಸುತ್ತಿದ್ದಾರೆ. ಇಲ್ಲಿನ ರಸ್ತೆ ಸರಿಪಡಿಸುವಂತೆ ಶ್ರೀಧರ ನಾಯ್ಕ ಎನ್ನುವವರು ಜಿಲ್ಲಾಧಿಕಾರಿಗಳಿಗೆ ವಾಟ್ಸಪ್ ಮೂಲಕ ದೂರು ಸಲ್ಲಿಸಿದ್ದಾರೆ. ವಾಟ್ಸಪ್ ದೂರಿನ ಅನ್ವಯ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.
ಹಾಗಾಗಿ ಸೋಮವಾರ ರಸ್ತೆ ಗುಂಡಿ ಮುಚ್ಚಲು ಹೈವೇ ರಸ್ತೆಯಲ್ಲಿ ತೆಗೆದು ಹಾಕಿದ ಹಳೆಯ ಡಾಂಬರೀಕರಣದ ಪುಡಿ ತಂದು ಮಣ್ಣು ಮುಚ್ಚಿ ಹಾಕುವ ರೀತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಮುಂದಾಗಿದ್ದ ಗುತ್ತಿಗೆದಾರರ ಕೆಲಸವನ್ನು ಖಂಡಿಸಿದ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಮರ್ಪಕ ರೀತಿಯಲ್ಲಿ ರಸ್ತೆ ಪ್ಯಾಚ್ ವರ್ಕ್ ಮಾಡಲು ಆಗ್ರಹಿಸಿ ಕಾಮಗಾರಿ ತಡೆಹಿಡಿದು ವಾಪಸ್ ಕಳುಹಿಸಿಕೊಡಲಾಗಿದೆ. ಇನ್ನು ಮಂಗಳವಾರ ಸಮರ್ಪಕ ಡಾಂಬರು ಮಿಶ್ರಿತ ರಸ್ತೆ ಮಾಡುವುದಾಗಿ ಗುತ್ತಿಗೆದಾರರು ಸಾರ್ವಜನಿಕರಿಗೆ ತಿಳಿಸಿದ್ದಾರೆ.