ಕಾರವಾರ: ಅನಾರೋಗ್ಯದಿಂದ ಕಳೆದೊಂದು ವಾರದಿಂದ ನಗರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಅವರು ದೀಪಾವಳಿ ಹಬ್ಬಕ್ಕೆ ಮನೆಗೆ ಹೋಗಬೇಕೆಂದು ಹಠ ಹಿಡಿದು ಉಪವಾಸ ಕುಳಿತು ಕೊನೆಗೂ ನಿವಾಸಕ್ಕೆ ತೆರಳಿದ್ದಾರೆ.
ಸುಕ್ರಜ್ಜಿಯವರು ಅಸ್ತಮಾ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಕಳೆದೊಂದು ವಾರದಿಂದ ಕ್ರೀಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಎರಡು ದಿನಗಳ ಹಿಂದೆಯೇ ಮನೆಗೆ ಕಳುಹಿಸುವಂತೆ ಸುಕ್ರಜ್ಜಿ ವೈದ್ಯರಲ್ಲಿ ಕೇಳಿಕೊಂಡಿದ್ದರಂತೆ. ಆದರೆ ಆಕ್ಸಿಜನ್ ಸಮಸ್ಯೆ ಹಿನ್ನೆಲೆಯಲ್ಲಿ ಕೆಲ ದಿನಗಳವರೆಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು.
ಆದರೆ ನಿನ್ನೆಯಿಂದ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮನೆಗೆ ಹೋಗಲೇಬೇಕು ಎಂದು ಸುಕ್ರಜ್ಜಿ ಹಠ ಹಿಡಿದು ಆಹಾರ ಸೇವಿಸದೆ ಉಪವಾಸ ಕುಳಿತ್ತಿದ್ದರು. ಕೊನೆಗೆ ಮಣಿದ ವೈದ್ಯರು, ಸುಕ್ರಜ್ಜಿಗೆ ಆಕ್ಸಿಜನ್ ವ್ಯವಸ್ಥೆ ಸಹಿತ ಮನೆಗೆ ತೆರಳಲು ವೈದ್ಯರು ಅನುವು ಮಾಡಿಕೊಟ್ಟಿದ್ದಾರೆ.
ಅಂಕೋಲಾದ ಬಡಿಗೇರಿಯಲ್ಲಿರುವ ಸುಕ್ರಜ್ಜಿ ಮನೆಗೆ ತೆರಳಿದ್ದು, ಏನಾದರು ಸಮಸ್ಯೆಗಳಿದ್ದಲ್ಲಿ ತಕ್ಷಣ ಸಂಪರ್ಕಿಸುವಂತೆ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು 261 ಮಂದಿಗೆ ಸೋಂಕು ದೃಢ: ಐವರು ಕೋವಿಡ್ಗೆ ಬಲಿ