ಕಾರವಾರ(ಉತ್ತರ ಕನ್ನಡ) : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರು ಕಂಗಾಲಾಗಿದ್ದಾರೆ. ಅದರಲ್ಲಿಯೂ ಕದ್ರಾ ಅಣೆಕಟ್ಟು ಕೆಳಭಾಗದ ರೈತರು ಬೆಳೆದ ಬೆಳೆಗಳು ಪ್ರತಿ ವರ್ಷವೂ ನೆರೆಪಾಲಾಗುವುದರಿಂದ ಅದೆಷ್ಟೋ ಮಂದಿ ವ್ಯವಸಾಯ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ ಇದೀಗ ಕೆಲ ಉತ್ಸಾಹಿ ಯುವಕರು ವಿಭಿನ್ನವಾಗಿ ಯೋಜನೆಯ ಮೂಲಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು,ನೆರೆಯಿಂದ ಉಂಟಾಗುವ ಬೆಳೆ ಹಾನಿಗೆ ಪರಿಹಾರ ಕಂಡುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಉಂಟಾದ ಪ್ರವಾಹದಿಂದಾಗಿ ನದಿ ಪಾತ್ರದ ಜನರು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದ್ದಾರೆ. ಅದರಲ್ಲಿಯೂ ಕದ್ರಾ ಜಲಾಶಯದ ಕೆಳ ಭಾಗದ ಕಾಳಿ ನದಿ ಅಂಚಿನಲ್ಲಿ ವಾಸವಾಗಿದ್ದ ಜನರ ಬದುಕು ಪ್ರವಾಹದಿಂದಾಗಿ ಇನ್ನೂ ದುಸ್ತರವಾಗಿತ್ತು. ಇದಲ್ಲದೇ ಈ ಭಾಗದಲ್ಲಿ ನೆರೆಗೆ ಕೃಷಿ ಭೂಮಿಗಳು ಮುಳುಗಡೆಯಾಗಿ ಹಾಕಿದ ಭತ್ತದ ಬೀಜಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ನಾಟಿ ಮಾಡಿದ ಗದ್ದೆಗಳಲ್ಲಿ ಕೆಸರು ತುಂಬಿ ಸಸಿಗಳು ಸತ್ತುಹೋಗಿದ್ದವು. ಇದರಿಂದ ಈ ಭಾಗದ ಜನ ಕೃಷಿ ಚಟುವಟಿಕೆಯಲ್ಲಿ ತೊಡಗಲು ಹಿಂದೇಟು ಹಾಕುತ್ತಿದ್ದರು.
ಮನೆ ಮಹಡಿ ಮೇಲೆ ಭತ್ತ ಭಿತ್ತನೆ : ಆದರೆ ಇದೀಗ ಖಾರ್ಗಾ, ವೈಲವಾಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದಿಷ್ಟು ಯುವ ಸಮೂಹ ಭತ್ತ ಬೆಳೆಯಲು ವಿಭಿನ್ನ ಯೋಜನೆಯನ್ನು ಕೈಗೊಂಡಿದ್ದಾರೆ. ಕಾಂಕ್ರೀಟ್ ಮಹಡಿ ಮೇಲೆ ಟ್ರೇಗಳಲ್ಲಿ ಬೀಜಗಳನ್ನು ಬಿತ್ತಿ ಸಸಿ ಮಾಡುತ್ತಿದ್ದಾರೆ. ಇದರಿಂದ ನೆರೆ, ದನಕರುಗಳ ಕಾಟ ಇಲ್ಲದೇ ಬೆಳೆಯುವ ಹೊಸ ಉಪಾಯವೊಂದನ್ನು ಇವರು ಕಂಡುಕೊಂಡಿದ್ದಾರೆ. ಈ ಮೂಲಕ ಕೃಷಿ ಯಂತ್ರಗಳ ಸಹಾಯದಿಂದ ಸುಲಭವಾಗಿ ನಾಟಿ ಮಾಡಲು ಸಾಧ್ಯವಾಗುತ್ತದೆ ಎಂದು ರೈತ ಕವಿಕಾಂತ್ ಸಾವಂತ್ ಹೇಳುತ್ತಾರೆ.
ಇನ್ನು ಪ್ರತಿ ವರ್ಷವೂ ನೆರೆಯ ಕಾರಣದಿಂದ ಭತ್ತದ ಮಡಿಯು ನೀರು ಪಾಲಾಗುವ ಕಾರಣ ಮತ್ತು ನೆರೆ ಇಳಿದ ನಂತರವೂ ಭತ್ತ ನಾಟಿ ಮಾಡಲು ಸಾಧ್ಯವಿರುವುದಿಲ್ಲ. ಇದರಿಂದ ಕಳೆದ ಕೆಲ ವರ್ಷಗಳಿಂದ ಪಾಳು ಬಿಟ್ಟಿದ್ದ ಭೂಮಿಯಲ್ಲಿಯೂ ಈ ಪ್ರಯೋಗದ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ. ಇಲ್ಲಿ 15 ರಿಂದ 20 ದಿನದಲ್ಲಿ ಸಸಿ ಬೆಳೆಯುವ ಕಾರಣ ಹೆಚ್ಚಿನ ಜನರು ಈ ಪದ್ಧತಿ ಅನುಸರಿಸುತ್ತಿದ್ದಾರೆ.
ಜೊತೆಗೆ ನಾಟಿ ಮಾಡಲು ಯಂತ್ರಗಳನ್ನು ಬಳಸುವುದರಿಂದ ಕೂಲಿ ಸಮಸ್ಯೆಯೂ ನೀಗುತ್ತಿದೆ. ಈ ವಿಧಾನದಿಂದ ಉತ್ತಮ ಭತ್ತ ಹಾಗೂ ಹುಲ್ಲನ್ನು ಪಡೆಯಲು ಸಾಧ್ಯವಾಗಿದೆ. ಈ ಬಗ್ಗೆ ಕೃಷಿ ಇಲಾಖೆಯೂ ಕೃಷಿಕರಿಗೆ ಸೂಕ್ತ ಮಾಹಿತಿ ನೀಡಿ ಪ್ರೋತ್ಸಾಹಿಸಿದಲ್ಲಿ ಪಾಳು ಬಿದ್ದಿರುವ ಜಮೀನುಗಳಲ್ಲಿ ಮತ್ತೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ರವಿಕ ಅವರು.
ಒಟ್ಟಾರೆ ಕಳೆದ ಮೂರು ವರ್ಷದಿಂದ ಕಾಳಿ ನದಿಯ ಪ್ರವಾಹದಿಂದ ಬೇಸತ್ತಿರುವ ಇಲ್ಲಿನ ರೈತರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಮೂಲಕ ಬಂಜರು ಭೂಮಿಗಳಲ್ಲೂ ಕೃಷಿ ಮಾಡಲು ಮುಂದಾಗಿದ್ದಾರೆ.