ಶಿರಸಿ(ಉತ್ತರ ಕನ್ನಡ) : ಇತ್ತೀಚೆಗೆ ಗ್ರಾಮೀಣ ಭಾಗದ ಭತ್ತದ ಗದ್ದೆಗಳು, ಅಲ್ಲಿನ ನಾಟಿ, ಸುಗ್ಗಿ ಹಾಡುಗಳು ಸೇರಿದಂತೆ ಗ್ರಾಮೀಣ ಸೊಗಡು ಮರೆಯಾಗುತ್ತಿದೆ. ಬೇರೆ ಬೇರೆ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆ ಸಹಿತ ರಾಜ್ಯದಲ್ಲೂ ಭತ್ತ ಬೆಳೆಯುವ ಪ್ರದೇಶಗಳು ಕಡಿಮೆಯಾಗುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ಮುಂದೊಂದು ದಿನ ಅನ್ನದ ತುಟಾಗ್ರತೆ(ಕೊರತೆ) ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಹೊರತುಪಡಿಸಿ ಭತ್ತವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಮೊದಲು 65 ಸಾವಿರ ಹೆಕ್ಟೇರ್ನಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಅದು 50 ಸಾವಿರ ಹೆಕ್ಟೇರ್ಗೆ ಬಂದು ನಿಂತಿದೆ. ಅಂದಾಜು 10ರಿಂದ 15 ಸಾವಿರ ಹೆಕ್ಟೇರ್ ಕಡಿಮೆಯಾಗಿದೆ. ವಾಣಿಜ್ಯ ಬೆಳೆಗಳಿಗೆ ಒತ್ತು ನೀಡಲಾಗುತ್ತಿದೆ.
ಇನ್ನೊಂದೆಡೆ ಭತ್ತ ಬೆಳೆಯುವ ಪ್ರದೇಶ ಕೈಬಿಡುವುದರಿಂದ ಆಹಾರ ಭದ್ರತೆ ಕಡಿಮೆಯಾಗುವ ಸಾಧ್ಯತೆಯಿದೆ. ಇಲಾಖೆಯಿಂದ ವಿವಿಧ ತಳಿಗಳ ಬೀಜಗಳನ್ನು ನೀಡಲಾಗುತ್ತದೆ. ಗೊಬ್ಬರ ವ್ಯವಸ್ಥೆ ಮಾಡಲಾಗುತ್ತದೆ. ಆದರೂ ಸಹ ರೈತರಲ್ಲಿ ಆಸಕ್ತಿ ಕಡಿಮೆಯಾಗಿದೆ. ಇದು ಅಕ್ಕಿ ದರ ಏರಿಕೆಗೂ ಕಾರಣವಾಗಿದೆ. ಕಾರಣ ಇಲಾಖೆಯ ಸಹಕಾರ ಪಡೆದು ಭತ್ತ ಬೆಳೆಯಲು ರೈತ ಆಸಕ್ತಿ ವಹಿಸಬೇಕಾದ ಅನಿವಾರ್ಯತೆಯಿದೆ ಎನ್ನುತ್ತಾರೆ ಕೃಷಿ ಇಲಾಖೆ ಉಪನಿರ್ದೇಶಕರಾದ ನಟರಾಜ.
ಲಾಭದಾಯವಲ್ಲದ ಬೆಳೆ ಎಂಬುದೂ ಕೂಡ ಭತ್ತದ ಪ್ರದೇಶಗಳು ಕಡಿಮೆಯಾಗಲು ಮುಖ್ಯ ಕಾರಣವಾಗಿದೆ. ಅಲ್ಲದೇ ಮಳೆಗಾಲದಲ್ಲಿ ಬೆಳೆಯುವ ಕಾರಣ ದೊಡ್ಡ ಪ್ರಮಾಣದಲ್ಲಿ ಅತಿವೃಷ್ಟಿಗೆ ತುತ್ತಾಗುತ್ತಿದೆ. ಸರ್ಕಾರದಿಂದ ನಿಗದಿತ ಪ್ರಮಾಣದಲ್ಲಿ ಗೊಬ್ಬರವೂ ಸಹ ಪೂರೈಕೆ ಆಗದಿರುವುದು, ಬೀಜಗಳು ಗ್ಯಾರಂಟಿ ಇಲ್ಲದೇ ಕೆಲವೊಮ್ಮೆ ಪೊಳ್ಳು ಭತ್ತ ಬೆಳೆಯುವುದು ರೈತರಲ್ಲಿ ನಿರಾಸಕ್ತಿ ಮೂಡುವಂತಾಗಿದೆ.
ಇದನ್ನೂ ಓದಿ: ಮಳೆಗೆ ನೆಲಕಚ್ಚಿದ ಭತ್ತ, ಅಳಿದುಳಿದ ಬೆಳೆ ರಕ್ಷಣೆಗೆ ಉತ್ತರಕನ್ನಡ ರೈತರ ಸಾಹಸ
ಅಲ್ಲದೇ ಭತ್ತ ಅಥವಾ ಅಕ್ಕಿ ರೈತರು ಮಾರಾಟ ಮಾಡುವಾಗ ಯಾವುದೇ ಸರಿಯಾದ ಬೆಲೆ ನಿಗದಿ ಮಾಡದಿರುವುದು ಭತ್ತದ ಬೆಳೆಗೆ ದೊಡ್ಡ ಹಿನ್ನಡೆಯಾಗಿದೆ. ಕಾರಣ ಸರ್ಕಾರದ ನೀತಿಗಳು ಬದಲಾಗಬೇಕಿದ್ದು, ಭತ್ತ ಬೆಳೆಯುವ ರೈತರಿಗೆ ಇನ್ನಷ್ಟು ಸಹಕಾರ ಸಿಗಬೇಕಿದೆ ಎಂಬುದು ಭತ್ತ ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಸಿ.ಎಫ್.ನಾಯ್ಕ ಅವರ ಅಭಿಪ್ರಾಯ.
ಒಟ್ಟಾರೆ, ವರ್ಷದಿಂದ ವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಕ್ಷೇತ್ರ ಕಡಿಮೆ ಆಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಯೋಜನೆ ಹಮ್ಮಿಕೊಂಡು, ಅನ್ನದ ತುಟಾಗ್ರತೆ ಬಾರದಂತೆ ಮಾಡಬೇಕಿದೆ.
ಇದನ್ನೂ ಓದಿ: ಪ್ರವಾಹದಿಂದ ಬುಡಮೇಲಾದ ವ್ಯವಸಾಯ: ಮನೆ ಮಹಡಿ ಮೇಲೆ ಭತ್ತ ಬಿತ್ತನೆ !