ಕಾರವಾರ: ಉತ್ತರಕನ್ನಡದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಅಂಕೋಲಾದ ಗಂಗಾವಳಿ ನದಿಪಾತ್ರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗತೊಡಗಿದೆ. ಯಲ್ಲಾಪುರ ಅಂಕೋಲಾ ಭಾಗಗಳಲ್ಲಿಯೂ ಎಡಬಿಡದೆ ಮಳೆಯಾದ ಹಿನ್ನಲೆಯಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಶಿರೂರು, ಕಲ್ಲೇಶ್ವರ, ಅಳವಳ್ಳಿ ಗುಳ್ಳಾಪುರ, ರಾಮನಗುಳಿ, ಡೊಂಗ್ರಿ ಗ್ರಾಮಗಳಿಗೆ ನೀರು ನುಗ್ಗ ತೊಡಗಿದೆ. ಈಗಾಗಲೇ ನದಿಯಂಚಿನ ಜನರನ್ನು ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಸೇರಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಶಿರೂರು ಬಳಿ ಗಂಗಾವಳಿ ನದಿ ಪಾತ್ರದ ಮನೆ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಕಾರವಾರ, ಅಂಕೋಲಾ, ಗೋಕರ್ಣ, ಕುಮಟಾದಲ್ಲಿಯೂ ನದಿ ಪಾತ್ರಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಅದೃಷ್ಟವಶಾತ್ ಇಂದು ಕರಾವಳಿಯಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ತಗ್ಗುವ ಭರವಸೆ ಮೂಡಿದೆ.