ಭಟ್ಕಳ: ಶಾಸಕ ಸುನೀಲ್ ನಾಯ್ಕ ಸಾರ್ವಜನಿಕರ ಯಾವುದೇ ಕೋರಿಕೆಗೆ ಸ್ಪಂದನೆ ನೀಡುತ್ತಿಲ್ಲ. ನಮ್ಮ ಜಿಲ್ಲೆಯ ಸಂಸದ ಮತ್ತು ಶಾಸಕರು ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎಂಬಂತಿದ್ದಾರೆ. ಇಂತವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮುರ್ಡೆಶ್ವರ ನಿವಾಸಿ ಶ್ರೀಧರ ನಾಯ್ಕ ಮಾತನಾಡಿ, ಮುರ್ಡೆಶ್ವರದ ರಸ್ತೆ ನಿರ್ಮಾಣಕ್ಕೆ ಸಂಬಂದಪಟ್ಟಂತೆ ಅಧಿಕಾರಿಗಳು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಸಹಾಯಕ್ಕೆ ನಿಂತಿದ್ದಾರೆ ಎಂದು ನಾವು ಶಾಸಕ ಸುನೀಲ್ ನಾಯ್ಕ ಗಮನಕ್ಕೆ ತಂದಿದ್ದೆವು. ಈ ಕುರಿತು ಶಾಸಕರು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ಕೊಟ್ಟಿದ್ದರು. ಆದರೆ ತಾಲೂಕಾಡಳಿದ ಅಧಿಕಾರಿಗಳು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಅಂಗಡಿ ಮಳಿಗೆಯ ರಕ್ಷಣೆ ಮಾಡುವ ದುರುದ್ದೇಶದಿಂದ ಇಕ್ಕಟ್ಟಾದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಶಾಸಕರ ಭರವಸೆ ಕೇವಲ ಆಶ್ವಾಸನೆಯಾಗಿ ಉಳಿದಿದೆ ಇದು ಸಾರ್ವಜನಿಕ ವಲಯಕ್ಕೆ ತುಂಬಾ ಅಸಮಾಧಾನವನ್ನುಂಟು ಮಾಡಿದೆ ಎಂದಿದ್ದಾರೆ.
ಮುರ್ಡೆಶ್ವರ ರಿಕ್ಷಾ ಚಾಲಕ ಮಾಲಕ ಸಂಘದ ಕಾರ್ಯದರ್ಶಿ ನಾಗರಾಜ ನಾಯ್ಕ, ಶಾಸಕರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಸಕರು ಮೂರು ತಿಂಗಳುಗಳಿಂದ ಬರಿ ಆಶ್ವಾಸನೆಯನ್ನು ಕೊಡುತ್ತಾ ಬಂದಿದ್ದು, ಯಾವುದೇ ಕ್ರಮವನ್ನು ಕೈಗೊಳ್ಳದೆ ಬೇಜವಾಬ್ದಾರಿತನವನ್ನು ತೋರಿದ್ದಾರೆ. ಇದರಿಂದ ನಮ್ಮ ಮನಸ್ಸಿಗೆ ತುಂಬಾ ನೋವುಂಟಾಗಿದ್ದು, ನಮಗೆ ಇಂತಹ ಸುಳ್ಳಿನ ಶಾಸಕರ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.