ಶಿರಸಿ: ತಾಲೂಕಿನ ಕೆಲ ಗ್ರಾಮಗಳನ್ನು ಶಿವಮೊಗ್ಗ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ಸೇರಿಸಲು ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ತಾಲೂಕಿನ ರಾಗಿಹೊಸಳ್ಳಿಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ವತಿಯಿಂದ ಸಾಂಕೇತಿಕ ರಸ್ತೆ ತಡೆ ಹಾಗೂ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರವು ಶಿವಮೊಗ್ಗದ ಶರಾವತಿ ವನ್ಯಜೀವಿ ಅಭಯಾರಣ್ಯಕ್ಕೆ ಹೆಚ್ಚುವರಿ ಅರಣ್ಯ ಪ್ರದೇಶವಾಗಿ ಶಿರಸಿ ತಾಲೂಕಿನ ಹೆಬ್ರೆ, ಹೊಸೂರು, ಬುಗಡಿ ಗ್ರಾಮಗಳನ್ನು ಸೇರಿಸಿದೆ. ಆದರೆ ಅಭಯಾರಣ್ಯ ಸೇರ್ಪಡೆಯಿಂದ ಜನರಿಗೆ ತೊಂದರೆ ಆಗಲಿದೆ. ಸಂಜೆ 6 ಗಂಟೆಯ ನಂತರ ಯಾವುದೇ ಸಂಪರ್ಕಕ್ಕೆ ಅವಕಾಶ ಕೊಡುವುದಿಲ್ಲ. ಮಾಲ್ಕಿ ಜಾಗದಲ್ಲೂ ಸೊಪ್ಪು ಕಡಿಯಲು, ಮಣ್ಣು ತೆಗೆಯಲು ಬಿಡುವುದಿಲ್ಲ. ಹಾಗಾಗಿ ನಮ್ಮ ಪ್ರಾಣವನ್ನಾದರೂ ಬಿಟ್ಟೇವು, ಆದರೆ ಅಭಯಾರಣ್ಯ ಸೇರ್ಪಡೆಗೆ ಅವಕಾಶ ಕೊಡುವುದಿಲ್ಲ ಎಂದು ಪ್ರತಿಭಟನಾಕಾರರು ಸರ್ಕಾರದ ಗೆಜೆಟ್ ನೊಟಿಫಿಕೇಶನ್ ಸುಟ್ಟು ಆಗ್ರಹಿಸಿದರು.
ಸರ್ಕಾರ ಹೊರಡಿಸಿರುವ ಗೆಜೆಟ್ ನೊಟಿಫಿಕೇಶನ್ಅನ್ನು ಈ ಅಧಿವೇಶನದಲ್ಲಿಯೇ ಕೈ ಬಿಡಬೇಕು. ಯಾವುದೇ ಕಾರಣಕ್ಕೂ ನಮ್ಮ ಅರಣ್ಯ ಪ್ರದೇಶವನ್ನು ಅಭಯಾರಣ್ಯ ಪ್ರದೇಶಕ್ಕೆ ಸೇರಿಸಬಾರದು. ಇದಕ್ಕಾಗಿ ಸ್ಥಳೀಯ ಶಾಸಕರೂ ಆದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಸಮಯವನ್ನು ಮೀಸಲಿರಿಸಿ, ಸರ್ಕಾರದ ಮೇಲೆ ಒತ್ತಡ ತಂದು ಇಲ್ಲಿನ ಜನರನ್ನು ಉಳಿಸಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು.