ಕಾರವಾರ : ಒಂದೇ ಕಣ್ಣು ಹೊಂದಿರುವ ನಾಗರ ಹಾವೊಂದು ತಾಲೂಕಿನ ಕದ್ರಾದಲ್ಲಿ ಕಂಡು ಬಂದಿದ್ದು, ರಕ್ಷಿಸಿ ಮರಳಿ ಕಾಡಿಗೆ ಬಿಡಲಾಗಿದೆ. ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎನ್ನುವವರ ಮನೆಯ ಬಳಿ ಸುಮಾರು 4.5 ಅಡಿಯ ಉದ್ದದ ನಾಗರ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಈ ಸಂದರ್ಭದಲ್ಲಿ ಹಾವಿಗೆ ಒಂದು ಕಣ್ಣು ಇಲ್ಲದ ವಿಷಯ ಗಮನಕ್ಕೆ ಬಂದಿದೆ. ಒಂದು ಕಣ್ಣಿಗೆ ಸಂಪೂರ್ಣವಾಗಿ ದೃಷ್ಟಿ ಇಲ್ಲ. ಇಂತಹ ಹಾವುಗಳಿರುವುದು ತೀರಾ ವಿರಳ. ಈ ನಾಗರನಿಗೆ ಕಣ್ಣಿನ ಗುಳಿ ಮಾತ್ರ ಇದ್ದು, ಕಣ್ಣುಗುಡ್ಡೆ ಇಲ್ಲ.
ಹಾವುಗಳು ಮುಂಗುಸಿ ಜೊತೆ ಕಾದಾಡುವ ಸಂದರ್ಭದಲ್ಲಿ ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಇಲಿಗಳು ಕಚ್ಚಿ ಹೀಗಾಗಿರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ.
ಅತಿ ವಿರಳವಾಗಿ ಅನುವಂಶೀಯವಾಗಿ, ಹಠಾತ್ ಬದಲಾವಣೆಯಿಂದಾಗಿಯೂ ಇಂತಹ ವಿದ್ಯಾಮಾನಗಳು ನಡೆಯುತ್ತವೆ. ಒಂದು ಕಣ್ಣಿನ ದೃಷ್ಠಿ ಕುಂಠಿತಗೊಂಡರೆ ಹಾವುಗಳ ಜೀವನಕ್ರಮದ ಮೇಲೇ ಯಾವುದೇ ಪರಿಣಾಮ ಬೀರುವುದಿಲ್ಲ. ಅವು ನಿಸರ್ಗದಲ್ಲಿ ಸಹಜ ಜೀವನ ನಡೆಸುವ ಸಾಮರ್ಥ್ಯ ಹೊಂದಿವೆ. ಇದು ನಾಗರ ಹಾವುಗಳ ಮಿಲನ ಋತುವಾಗಿದ್ದು ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ಒಂದು ಹೆಣ್ಣು ನಾಗರ ಹಾವು ಇದ್ದ ಜಾಗದ ಆಸುಪಾಸಿನಲ್ಲಿ ಎರಡು ನಾಗರ ಹಾವುಗಳಿರುವ ಸಾಧ್ಯತೆ ಇರುತ್ತದೆ ಎಂದು ಮಂಜುನಾಥ ನಾಯಕ ಹೇಳಿದರು.
ಇತ್ತೀಚೆಗೆ ವೇಲಾ ಪ್ರಭೇದದ ಏಡಿ ಪತ್ತೆ: ಪ್ರಕೃತಿಯಲ್ಲಿ ವಿಭಿನ್ನ ರೀತಿಯ ಜೀವ ಪ್ರಭೇದಗಳು ಕಂಡುಬರುವುದು ಸಾಮಾನ್ಯ. ಅದೇ ರೀತಿ ಯಲ್ಲಾಪುರ ತಾಲೂಕಿನಲ್ಲಿ ಸಿಹಿನೀರಿನಲ್ಲಿ ವಾಸಿಸುವ ಹೊಸ ಪ್ರಭೇದದ ಏಡಿಯೊಂದು ಕಂಡುಬಂದಿತ್ತು. ಈ ಏಡಿಗೆ 'ವೇಲಾ ಬಾಂಧವ್ಯ' ಎಂದು ನಾಮಕರಣ ಮಾಡಲಾಗಿದೆ. ತಾಲೂಕಿನ ಬಾರೆಯಲ್ಲಿರುವ ತೋಟವೊಂದರಲ್ಲಿ ಏಡಿ ಕಾಣಿಸಿಕೊಂಡಿತ್ತು. ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ ಮತ್ತು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಸಮೀರಕುಮಾರ ಪಾಟಿ ತಂಡ ಏಡಿಯನ್ನು ಪತ್ತೆ ಮಾಡಿ, ಸಂಶೋಧನೆ ನಡೆಸಿದೆ.
ಇದನ್ನೂ ಓದಿ: ಮೈಸೂರು: ಕಾಡು ಬಿಟ್ಟು ನಾಡಿಗಿಳಿದ ಆನೆಗಳ ದಂಡು; ರೈತರ ಆತಂಕ