ಕಾರವಾರ : ಕಾರವಾರದಲ್ಲಿ ಪ್ರತಿವರ್ಷ ನಡೆಯುವ ಮಾರುತಿ ದೇವರ ಜಾತ್ರೆಯು ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಬಣ್ಣ ಬಣ್ಣದ ಹತ್ತಾರು ಬಗೆಯ ರಂಗೋಲಿಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯುತ್ತಿತ್ತು.
ಈ ರಂಗೋಲಿಗಳನ್ನು ನೋಡುವುದಕ್ಕೆ ಸ್ಥಳೀಯರು ಮಾತ್ರವಲ್ಲದೇ ಗೋವಾದಿಂದ ಸಹ ಜನರು ಆಗಮಿಸುತ್ತಾರೆ. ಆದ್ರೆ, ಈ ಬಾರಿ ಕೊರೊನಾ ಹಾಗೂ ರೂಪಾಂತರಿ ಒಮಿಕ್ರಾನ್ ಆತಂಕದ ಹಿನ್ನೆಲೆ ವಿಧಿಸಿರುವ ನೈಟ್ ಕರ್ಫ್ಯೂನಿಂದಾಗಿ ಜಾತ್ರೆಯಲ್ಲಿ ಮೊದಲಿದ್ದ ಕಳೆ ಇರಲಿಲ್ಲ.
ಆಕರ್ಷಣೀಯ ರಂಗೋಲಿಗಳು : ಒಂದೆಡೆ ರಾಜನಂತೆ ಕುಳಿತಿರುವ ಅಪ್ಪುವಿನ ಭಾವಚಿತ್ರ, ಇನ್ನೊಂದೆಡೆ ಯೂನಿಫಾರ್ಮ್‌ನಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿರುವ ಬಿಪಿನ್ ರಾವತ್, ಮತ್ತೊಂದೆಡೆ ಕಣ್ಮನ ಸೆಳೆಯುವಂತಿರುವ ಬಣ್ಣ ಬಣ್ಣದ ಚಿತ್ತಾರಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಜನರು. ಜನರು ಹೀಗೆ ಕಣ್ತುಂಬಿಕೊಳ್ಳುವ ಚಿತ್ತಾರಗಳು ಯಾವುದೋ ಪ್ರಿಂಟ್‌ನಿಂದ ತೆಗೆದ ಚಿತ್ರಗಳಲ್ಲ. ಬದಲಿಗೆ ಕಲಾವಿದರ ಕೈಯಲ್ಲಿ ಅರಳಿದ ರಂಗೋಲಿಗಳು.
ರಂಗೋಲಿಯಲ್ಲಿ ಅರಳಿತು ಅಪ್ಪು, ಬಿಪಿನ್ ರಾವತ್ ಭಾವಚಿತ್ರ : ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಮಾರುತಿಗಲ್ಲಿಯ ಮಾರುತಿ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಮಾರುತಿ ದೇವರ ಜಾತ್ರೆಯಲ್ಲಿ ರಂಗೋಲಿಗಳೇ ಜನಾಕರ್ಷಣೆಯ ಕೇಂದ್ರ ಬಿಂದು. ಜಾತ್ರೆಯ ವೇಳೆ ಆಯೋಜಿಸಲಾಗುವ ರಂಗೋಲಿ ಸ್ಪರ್ಧೆಯಲ್ಲಿ ಸ್ಥಳೀಯರು ಬಗೆ ಬಗೆಯ ರಂಗೋಲಿಗಳನ್ನ ಹಾಕುತ್ತಾರೆ.
ಅದರಲ್ಲೂ ನೈಜ ಚಿತ್ತಾರದಂತೆ ಹಾಕುವ ರಂಗೋಲಿಗಳೇ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ. ಈ ಬಾರಿ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ರಂಗೋಲಿಗಳೇ ಎಲ್ಲೆಡೆ ರಾರಾಜಿಸುತ್ತಿದ್ದವು. ಪುನೀತ್ ಅವರ ವಿವಿಧ ಬಗೆಯ ರಂಗೋಲಿಗಳು ಜಾತ್ರೆಗೆ ಆಗಮಿಸಿದ್ದವರ ಕಣ್ಮನ ಸೆಳೆದವು. ಅಲ್ಲದೇ ಇತ್ತೀಚೆಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಚೀಫ್ ಡಿಫೆನ್ಸ್ ಕಮಾಂಡರ್ ಬಿಪಿನ್ ರಾವತ್ ಸೇರಿದಂತೆ ಹಲವು ಬಗೆಯ ರಂಗೋಲಿಗಳು ಜನರನ್ನು ಆಕರ್ಷಿಸಿದವು.
ಜಾಗೃತಿ ಮೂಡಿಸುವ ರಂಗೋಲಿ : ಇನ್ನು ಮಾರುತಿ ಜಾತ್ರೆಯಲ್ಲಿ ಕೇವಲ ಖ್ಯಾತ ವ್ಯಕ್ತಿಗಳ ಭಾವಚಿತ್ರ ಮಾತ್ರ ಬಿಡಿಸದೇ ಚುಕ್ಕಿ ರಂಗೋಲಿ, ಹೂವಿನಿಂದ ಹಾಕಿದ ರಂಗೋಲಿ, ವಿವಿಧ ಧಾನ್ಯಗಳು ಹಾಗೂ ಕಷ್ಟದಲ್ಲಿರುವವರಿಗೆ ಸಾಧ್ಯವಾದ ಸಹಾಯ ನೀಡುವಂತೆ ಜಾಗೃತಿ ಮೂಡಿಸುವ ರಂಗೋಲಿಯನ್ನು ಸಹ ಪ್ರದರ್ಶಿಸಲಾಯಿತು.
ಸ್ಪರ್ಧೆಯಾಗಿ ಮಾರ್ಪಾಟಾದ ಹಿಂದಿನ ಆಚರಣೆ : ಈ ಹಿಂದೆ ಮಾರುತಿ ದೇವಾಲಯದ ಜಾತ್ರೆ ವೇಳೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ ದೇವರನ್ನು ಸ್ವಾಗತಿಸುತ್ತಿದ್ದರಂತೆ. ಇದು ವರ್ಷದಿಂದ ವರ್ಷಕ್ಕೆ ರಂಗೋಲಿ ಸ್ಪರ್ಧೆಯಾಗಿ ಮಾರ್ಪಟ್ಟಿದ್ದು, ಜನರು ಪ್ರೇಕ್ಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಪರ್ಧೆಯಲ್ಲಿ ವಿಭಿನ್ನ ರೀತಿಯಲ್ಲಿ ರಂಗೋಲಿಗಳನ್ನ ಹಾಕಲು ಪ್ರಾರಂಭಿಸಿದರು.
ಇದನ್ನೂ ಓದಿ: ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಚಿನ್ನದ ಪದಕ ಪಡೆದ ಮಹಿಳೆಯರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ
ಈ ಬಾರಿ ಒಮಿಕ್ರಾನ್ ಹಾಗೂ ಕೊರೊನಾ ಆತಂಕದಿಂದಾಗಿ ಕರ್ಫ್ಯೂವನ್ನು ವಿಧಿಸಲಾಗಿದೆ. ಜಾತ್ರೆಯಲ್ಲಿ ಹೆಚ್ಚು ಜನರು ಸೇರಲು ಅವಕಾಶ ಇಲ್ಲದ ಹಿನ್ನೆಲೆ ರಂಗೋಲಿಗಳ ಸಂಖ್ಯೆ ಕಡಿಮೆಯಾಗಿತ್ತು. ಪ್ರತಿವರ್ಷ ರಾಜ್ಯ, ಹೊರ ರಾಜ್ಯಗಳ ಜನರು ಸಹ ಆಗಮಿಸುತ್ತಿದ್ದ ಜಾತ್ರೆಗೆ ಈ ಬಾರಿ ಜನರ ಸಂಖ್ಯೆ ಸಹ ಕಡಿಮೆಯಾಗಿದ್ದು, ಜಾತ್ರೆಯ ಹುರುಪು ತಗ್ಗಿತ್ತು.