ಶಿರಸಿ (ಉತ್ತರ ಕನ್ನಡ): ಜ.15ರಿಂದ ರಾಜ್ಯದಾದ್ಯಂತ ಪದವಿ ವಿದ್ಯಾರ್ಥಿಗಳಿಗೆ ಆಫ್ಲೈನ್ ತರಗತಿಗಳು ಆರಂಭವಾಗಿವೆ. ಆದರೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಇನ್ನೂ ನಡೆಯದ ಕಾರಣ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕಾಲೇಜಿಗೆ ಬಂದೂ ತರಗತಿಗಳು ನಡೆಯದ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಡೆಯುತ್ತಿದ್ದ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೊರೊನಾದಿಂದ ರದ್ದಾಗಿತ್ತು. ಆದರೆ ಈಗ ಕಳೆದ ಶುಕ್ರವಾರದಿಂದ ಕಾಲೇಜು ಆರಂಭವಾಗಿದ್ದು, ಶಿಕ್ಷರಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಿರಸಿ ರಾಯಪ್ಪ ಹುಲೇಕಲ್ ಪದವಿ ಕಾಲೇಜಿಗೆ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಬಿಬಿಎ ಸೇರಿದಂತೆ ನಾಲ್ಕು ವಿಭಾಗಗಳಿಂದ ಒಟ್ಟು 3,087 ವಿದ್ಯಾರ್ಥಿಗಳಿದ್ದು, ಕನಿಷ್ಠ 135 ಶಿಕ್ಷಕರ ಅಗತ್ಯವಿದೆ.
ಆದರೆ ಕಾಲೇಜಿನಲ್ಲಿ ಕೇವಲ 19 ಖಾಯಂ ಶಿಕ್ಷಕರು ಮಾತ್ರ ಇದ್ದು, ವಿದ್ಯಾರ್ಥಿಗಳು ಆಫ್ಲೈನ್ ತರಗತಿಗಾಗಿ ಕಾಲೇಜಿಗೆ ಆಗಮಿಸಿದರೂ ಪಾಠ ಪೂರ್ತಿ ಮಾಡುವುದು ಅಸಾಧ್ಯ ಎನ್ನುವಂತಾಗಿದೆ. ಇದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ ) ಪ್ರತಿಭಟನೆ ನಡೆಸಿದ್ದು, ಅತಿಥಿ ಶಿಕ್ಷಕರ ನೇಮಕಾತಿ ನಡೆಸುವಂತೆ ಆಗ್ರಹಿಸಿದೆ.
ಖಾಸಗಿ ಅಥವಾ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯು ಈ ಹಿಂದಿನಂತೆಯೇ ಮುಂದುವರೆದಿದ್ದು, ಕೊರೊನಾ ಸಂದರ್ಭದಲ್ಲಿ ಅರ್ಧದಷ್ಟು ಹಣವನ್ನು ನೀಡಿ ಮುಂದುವರೆಸಲಾಗಿದೆ. ಇದರಿಂದ ಅವರಿಗೆ ಆಫ್ಲೈನ್ ತರಗತಿ ಮಾಡಲು ಯಾವುದೇ ಸಮಸ್ಯೆ ಉಂಟಾಗದಿದ್ದರೂ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಪಾಠಕ್ಕೆ ಯಾರನ್ನು ಕರೆತರುವುದು ಎನ್ನುವಂತಾಗಿದೆ.
ಅಲ್ಲದೇ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಫೆಬ್ರುವರಿಯಲ್ಲಿ ಪರೀಕ್ಷೆ ನಡೆಸುವ ಮುನ್ಸೂಚನೆ ಬಂದಿದ್ದು, ಪಾಠ ಮಾಡುವುದು ಅನಿವಾರ್ಯವಾಗಿದೆ. ಆದರೆ ಪಾಠ ಮಾಡಲು ಶಿಕ್ಷಕರ ಕೊರತೆ ಎದುರಿಸುತ್ತಿರುವ ಸರ್ಕಾರಿ ಕಾಲೇಜುಗಳಿಗೆ ಶೀಘ್ರದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಆಗಬೇಕಿದ್ದು, ಈ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಇದನ್ನೂ ಓದಿ: ಗೋಕರ್ಣ ಬೀಚ್ನಲ್ಲಿ ಅಲೆಗಳಿಗೆ ಕೊಚ್ಚಿ ಹೋಗಿದ್ದ ಮೂವರು ಸಾವು: ಇಬ್ಬರ ರಕ್ಷಣೆ