ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಬೇಕೆಂಬ ಒತ್ತಾಯ ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಿದೆ. ಮತ್ತೊಂದೆಡೆ, ಜಿಲ್ಲೆಯ ಕಾಳಿ ನದಿಯಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ದಂಧೆಕೋರರು ಬೇಕಾಬಿಟ್ಟಿ ದರಕ್ಕೆ ಮರಳು ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಮರಳು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಕರಾವಳಿ ಭಾಗದ ಕಾಳಿ, ಶರಾವತಿ, ಅಘನಾಶಿನಿ ಹಾಗೂ ಗಂಗಾವಳಿ ನದಿಯಲ್ಲಿ ಈ ಹಿಂದಿನಿಂದ ಮರಳುಗಾರಿಕೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಹಸಿರು ಪೀಠದ ಆದೇಶದ ಮೇಲೆ ಮರಳುಗಾರಿಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮರಳಿನ ಸಮಸ್ಯೆ ಇರುವುದರಿಂದ ಅಧಿಕೃತವಾಗಿ ಮರಳುಗಾರಿಕೆಗೆ ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಜನರು ಆಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರ ಅನುಮತಿ ನೀಡದ ಕಾರಣ ಅಕ್ರಮ ದಂಧೆಕೋರರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ಸಾರ್ವಜನಿಕರ ದೂರುಗಳಿಂದ ಎಚ್ಚೆತ್ತ ಕಾರವಾರ ಉಪವಿಭಾಗಾಧಿಕಾರಿ ಕಳೆದ ಮೂರ್ನಾಲ್ಕು ದಿನಗಳಿಂದ ಕಾರವಾರ ತಾಲೂಕಿನ ವಿವಿಧ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ನೂರು ಮೆಟ್ರಿಕ್ ಟನ್ಗೂ ಅಧಿಕ ಮರಳನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ತಾಲೂಕಿನ ಕೆರವಡಿ, ಹಣಕೋಣ, ಸುಂಕೇರಿ, ಕಿನ್ನರ ಸೇರಿದಂತೆ ವಿವಿಧ ಭಾಗದಲ್ಲಿ ದಾಳಿ ನಡೆಸಿ ಮರಳನ್ನು ವಶಕ್ಕೆ ಪಡೆಯಲಾಗಿದೆ.
ಕಾರವಾರದ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಮಾತನಾಡಿ, "ನಮಗೆ ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇಲೆ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಪೊಲೀಸರ ತಂಡದೊಂದಿಗೆ ತೆರಳಿ ವಿವಿಧ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡಿದ್ದೇವೆ. ಸರ್ಕಾರದ ಯಾವುದೇ ಇಲಾಖೆಯಾಗಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗದಂತೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದೇವೆ" ಎಂದು ತಿಳಿಸಿದರು.
ಮರಳುಗಾರಿಕೆಯ ಲೀಸ್ ಪಡೆದ ಶ್ರವಣ್ ಶಿರೋಡಕರ್ ಮಾತನಾಡಿ, "ನಾವು ಜಿಲ್ಲಾಧಿಕಾರಿಗೆ ಮರಳುಗಾರಿಕೆಗೆ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದೇವೆ. ನಾವು ಪರಿಸರ ನಿರಾಪೇಕ್ಷಣ ಪತ್ರ ತಂದು ಒಂದುವರೆ ತಿಂಗಳಾಗಿದೆ, ಆದರೆ ಇದುವರೆಗೂ ಸಭೆ ಕರೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಭೆಗೆ ಸಮಯ ನಿಗಿಧಿ ಪಡೆಸುತ್ತೇನೆ ಎಂದಿದ್ದಾರೆ, ಆದರೆ ನಾವು ತಂದಿರುವ ಆರ್ಡರ್ ಸರಿಯಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ಮಾಡಿ ಮರಳನ್ನು ವಶಕ್ಕೆ ಪಡೆದಿದ್ದಾರೆ. ಆದರೂ ಕುಮಟಾ, ಹೊನ್ನಾವರದಿಂದ ಅಕ್ರಮ ಮರಳು ಬರುತ್ತಿದೆ. ಮರಳಿನ ಸಮಸ್ಯೆಯಿಂದ ಅಭಿವೃದ್ಧಿ ಕಾರ್ಯಗಳು ನಿಂತಿವೆ. ಹೀಗಾಗಿ ಸರ್ಕಾರ ಅಧಿಕೃತವಾಗಿ ಮರಳುಗಾರಿಕೆಗೆ ಅನುಮತಿ ನೀಡಬೇಕು, ಇದರಿಂದ ಮರಳು ಕಡಿಮೆ ಬೆಲೆಗೆ ಸಿಗುತ್ತದೆ" ಎಂದರು.
ಇದನ್ನೂ ಓದಿ: ಮೈಸೂರಿನಂತೆ ಕರಾವಳಿಯಲ್ಲೂ ನಡೀತಿದೆ ದಸರಾ ಬೊಂಬೆಗಳ ಪ್ರದರ್ಶನ- ವಿಡಿಯೋ