ಕಾರವಾರ: ಅವರು ಅನಾದಿಕಾಲದಿಂದಲೂ ಗುಡ್ಡದ ಮೇಲೆ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಜನರು. ಸಣ್ಣ ಬೆಂಕಿ ಪೊಟ್ಟಣದಿಂದ ಹಿಡಿದು ಏನೇ ಬೇಕಾದರೂ ಸಹ ಐದಾರು ಕಿ.ಮೀ ಕಾಡಿನ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಇನ್ನೊಂದು ಗ್ರಾಮಕ್ಕೆ ಬಂದೇ ಕೊಂಡೊಯ್ಯಬೇಕು. ಇಂತಹ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದರಂತೂ ಅವರ ಕಷ್ಟ ಹೇಳತೀರದಾಗಿದೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಅಷ್ಟಾದರೂ ಸಹ ಮೂಲ ಸೌಕರ್ಯಗಳು ತಲುಪದ ಗ್ರಾಮಗಳು ಇನ್ನೂ ಜೀವಂತವಾಗಿವೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವರಿಲಬೇಣ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದ ವೃದ್ಧರೊಬ್ಬರನ್ನು ಜೋಳಿಗೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ಗುಡ್ಡದ ಮೇಲಿರುವ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲವಾಗಿದ್ದು, ಕಾಡಿನ ನಡುವಿನ ಕಾಲು ಹಾದಿಯಲ್ಲೇ ಸಾಗಬೇಕಾಗಿದೆ.
ಅದರಂತೆ ಗ್ರಾಮದ ನಿವಾಸಿಯಿಯಾಗಿದ್ದ ನೂರಾ ಪೊಕ್ಕಾ ಗೌಡ ಎಂಬುವವರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಡೆದು ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಕುಟುಂಬಸ್ಥರು, ಗ್ರಾಮಸ್ಥರು ಸೇರಿ ಖುರ್ಚಿಯ ಮೇಲೆ ಅವರನ್ನು ಕೂರಿಸಿ ಜೋಳಿಗೆ ಮಾಡಿಕೊಂಡು ಸುಮಾರು 5 ಕಿ.ಮೀ ದೂರ ಸಕಲಬೇಣ ಗ್ರಾಮದವರೆಗೆ ಹೊತ್ತುಕೊಂಡೇ ತಂದಿದ್ದಾರೆ. ಅಲ್ಲಿಂದ ಆಂಬ್ಯುಲೆನ್ಸ್ ತಡವಾಗುತ್ತದೆ ಎಂದು ಖಾಸಗಿ ವಾಹನದಲ್ಲೇ ಅಂಕೋಲಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಗ್ರಾಮಕ್ಕೆ ತೆರಳಲು ಗುಡ್ಡ ಹತ್ತಬೇಕು: ಇನ್ನು ವರಿಲಬೇಣ ಗ್ರಾಮದಲ್ಲಿ ಸುಮಾರು 10 ರಿಂದ 12 ಮನೆಗಳಿದ್ದು, ಹಾಲಕ್ಕಿ ಗೌಡ ಸಮುದಾಯದ ಕುಟುಂಬಗಳೇ ವಾಸವಾಗಿವೆ. ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಗ್ರಾಮ ಹೆದ್ದಾರಿಯಿಂದ ಸುಮಾರು 8 ಕಿಮೀ ದೂರದಲ್ಲಿದ್ದು ಗ್ರಾಮಕ್ಕೆ ತೆರಳಲು ಕೇವಲ 3 ಕಿಮೀ ಮಾತ್ರ ರಸ್ತೆ ವ್ಯವಸ್ಥೆಯಿದೆ. ಅಲ್ಲಿಂದ ಸುಮಾರು 5 ಕಿಮೀ ಕಾಡಿನ ನಡುವೆ ಕಾಲುಹಾದಿಯಲ್ಲಿ ಗುಡ್ಡ ಹತ್ತಿ ಗ್ರಾಮಕ್ಕೆ ತೆರಳಬೇಕು.
ಮಳೆಗಾಲದಲ್ಲಂತೂ ಇಲ್ಲಿನವರ ಪರಿಸ್ಥಿತಿ ಹೇಳತೀರದಾಗಿದ್ದು, ತಿಂಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿ ತಲೆಯ ಮೇಲೆ ಹೊತ್ತುಕೊಂಡು ತಂದು ಸಂಗ್ರಹಿಸಿಕೊಳ್ಳುತ್ತಾರೆ. ಗ್ರಾಮದ ವಿದ್ಯಾರ್ಥಿಗಳು ಇಲ್ಲಿಂದ ಶಾಲೆ - ಕಾಲೇಜಿಗೆ ತೆರಳಲು ಸಾಧ್ಯವಾಗದೆ, ಬೇರೆ ಊರುಗಳ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸ್ಥಳೀಯ ಪ್ರತಿನಿಧಿಗಳಿಗೆ ಮನವಿ: ಗ್ರಾಮದವರಿಗೆ ಕೃಷಿಯೊಂದೇ ಜೀವನಾಧಾರವಾಗಿದ್ದು, ಬೇರೆ ಕೆಲಸಕ್ಕೆ ತೆರಳಬೇಕು ಎಂದರೆ ಗುಡ್ಡ ಇಳಿದು ಸಮೀಪದ ಅವರ್ಸಾ ಗ್ರಾಮಕ್ಕೆ ಆಗಮಿಸಬೇಕು. ಪ್ರತಿನಿತ್ಯ ಓಡಾಡಲು ಸಾಧ್ಯವಾಗದ ಹಿನ್ನೆಲೆ ಕೆಲವರು ಗುಡ್ಡದ ಕೆಳಗೆ ಜಾಗ ಖರೀದಿಸಿ ಮನೆ ಕಟ್ಟಿಕೊಂಡಿದ್ದಾರೆ. ಇನ್ನು ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಂಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಹ ಸಲ್ಲಿಸಿದ್ದು, ಅರಣ್ಯ ಸಮಸ್ಯೆಯಿಂದಾಗಿ ಅದೂ ಸಹ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೇ ಮೂಲಭೂತ ಅಗತ್ಯತೆಯಾದ ರಸ್ತೆ ವ್ಯವಸ್ಥೆಯೇ ಸಿಗದೆ ವರಿಲಬೇಣ ಗ್ರಾಮಸ್ಥರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದು, ಕಚ್ಚಾ ರಸ್ತೆಯನ್ನಾದರೂ ನಿರ್ಮಿಸಿಕೊಟ್ಟಲ್ಲಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ಸಂಬಂಧಪಟ್ಟವರು ಇತ್ತ ಗಮನಹರಿಸಿ ಗ್ರಾಮಸ್ಥರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ.
ಇದನ್ನೂ ಓದಿ: ಗ್ರಾಮಕ್ಕಿಲ್ಲ ರಸ್ತೆ ಸೌಲಭ್ಯ.. ಮೃತ ವ್ಯಕ್ತಿಯನ್ನು ಡೋಲಿಯಲ್ಲಿ ಹೊತ್ತು ಸಾಗಿದ ಜನ